ಮಾಧ್ಯಮಗಳೂ ಮೋಸ ಮಾಡ್ತವಾ ??? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಬಹುಷಃ ಇದು ಸಕಾಲ . ಟಿವಿ , ಪತ್ರಿಕೆಗಳು ಹಠಕ್ಕೆ ಬಿದ್ದಿರು ವಂತೆ ’ ಮಾಧ್ಯಮ ತತ್ವ ’ ಗಳನ್ನು ಗಾಳಿಗೆ ತೂರುತ್ತಿರುವ ಈ ಸಂದರ್ಭದಲ್ಲಿ ಇದು ಪ್ರಸ್ತುತ ಪ್ರಶ್ನೆ . ಇದೇ ಥೀಮ್ ಹಿಡಿದು ಹುಡುಕಾಟಕ್ಕೆ ಹೊರಟರೆ ಉತ್ತರ ’ ಹೌದು ’ ಎಂದೇ ಆಗಿರುತ್ತದೆ . ಈಗಿನ ರಿಯಾಲಿಟಿ ಷೋಗಳನ್ನು , ’ ಭಯಾನಕ , ವಿಸ್ಮಯ , ನಿಗೂಢ , ಹಾಗೂ ಅಗೋಚರ ...’ ಎಂದು ಜನರನ್ನು ಕುರಿಮಂದೆಯಂತೆ ಮರುಳು ಮಾಡುತ್ತಿರುವ ಕಾರ್ಯಕ್ರಮಗಳನ್ನು ನೋಡಿದರೆ ಈ ಪ್ರಶ್ನೆಗೆ ಸೂಕ್ತ ಸಾಕ್ಷ್ಯಗಳು ದೊರೆಯುತ್ತವೆ . ಅಷ್ಟಕ್ಕೂ ಈ ಪ್ರಶ್ನೆ ಈಗ ಹುಟ್ಟಿದ್ದಾದರೂ ಯಾಕೆ ? ಇತ್ತೀಚೆಗೆ ಬಿಡುಗಡೆಯಾದ , ಯೋಗರಾಜಭಟ್ ನಿರ್ದೇಶಿಸಿ , ಜಯಂತ ಕಾಯ್ಕಿಣಿ ಸಾಹಿತ್ಯ ಬರೆದು , ಮನೊಮೂರ್ತಿ ಸಂಗೀತ ಒದಗಿಸಿರುವ ’ ಮನಸಾರೆ ’ ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಬಂದ ರಿವ್ಯೂ ನೋಡಿ , ಚಿತ್ರ ವೀಕ್ಷಿಸಿ ಬಂದರೆ ಇದು ಕೇವಲ ಪ್ರಶ್ನೆ ಮಾತ್ರ ಅಲ್ಲ ಈ ಹೊತ್ತಿನ ಜರೂರು ಎಂದು ಪ್ರಜ್ಞಾವಂತರ್ಯಾರಿಗಾದರೂ ಅನಿಸದೆ ಇರುವುದಿಲ್ಲ . ’ ಮನಸಾರೆ ’ ಎಂಬ ಹುಚ್ಚರ ಚಿತ್ರಕ್ಕೆ ಬಹುತೇಕ ಮುದ್ರಣ , ದೃಶ್ಯ ಮತ್ತು ಇತ್ತೀಚಿನ ಇಂಟರ್ನೆಟ್ ಮಾಧ್ಯಮಗಳು ಭಾರಿ ಪ್ರಚಾರ ನೀಡಿದವು ; ಇನ್ನಿಲ್ಲದಂತೆ ಬರೆದವು . ಇದೊಂದು ಪ್ರೇಮಕಾವ್ಯ , ಚೆಂದ...