ಕನ್ನಡಕ್ಕಿದೆಂಥಾ ದುರ್ಗತಿ


ಕುವೆಂಪು ಬರೆದ ’’ಶ್ರೀ ರಾಮಾಯಣ ದರ್ಶನಂ’’ ಕೃತಿ ಕನ್ನಡ ಸಾಹಿತ್ಯದ ಮೇರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಲಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ವದ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇಂಥ ಮೇರು ಕೃತಿಯ ಲಭ್ಯತೆ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ. ಕನ್ನಡ ಸಾಹಿತ್ಯಕ್ಕೆ, ಮೊಟ್ಟ ಮೊದಲ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ‘ಜ್ಞಾನಪೀಠ’ವನ್ನು ತಂದುಕೊಟ್ಟು, ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದ ಒಂದು ಮಹಾನ್‌ ಕೃತಿ ಓದುಗರಿಗೆ ಲಭ್ಯವಿಲ್ಲ ಎಂದರೆ ಇದೆಂಥಾ ದುರ್ಗತಿ. ಇದು ಕನ್ನಡಿಗರು ತಲೆ ತಗ್ಗಿಸುವಂಥ ವಿಚಾರ. ಕುವೆಂಪು ಕನ್ನಡ ಸಾಹಿತ್ಯದ ಮೇರು ಪುರುಷ. ಅವರ ತಪಸ್ಸಿನ ಫಲವಾಗಿ ಆವಿರ್ಭವಿಸಿದ ಅನರ್ಘ್ಯ ಕಾವ್ಯವೊಂದು ಓದುಗರಿಗೆ ಲಭ್ಯವಾಗದಿರುವುದು ಅತ್ಯಂತ ಖೇದದ ಸಂಗತಿ.

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರೂಗಳ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಕೆಲವೇ ದಿನಗಳಲ್ಲಿ ಈ ಮೇರುಕೃತಿ ಸಹೃದಯರ ಮನೆ ಸೇರಿತು. ಎಲ್ಲೂ ಪ್ರತಿಗಳು ಲಭ್ಯವಾಗದಾದವು. ಅಂದಿನಿಂದ ಇದು ಮರು ಮುದ್ರಣಗೊಂಡಿಲ್ಲ. ನಾನು ಈ ಕೃತಿಗಾಗಿ ಸುತ್ತದೇ ಇರುವ ಪುಸ್ತಕ ಮಳಿಗೆಗೆಳಿಲ್ಲ. ತಡಕಾಡದ ಜಾಗಗಳಿಲ್ಲ. ಒಟ್ಟಿನಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಗಾಗಿ ಮೂಲೆ ಮೂಲೆಯಲ್ಲಿ ಶೋಧಿಸಿದ್ದೇನೆ. ಎಲ್ಲಿಯೂ ಲಭ್ಯವಿಲ್ಲ. ನನ್ನಂತೆಯೇ ಈ ಮಹಾಕಾವ್ಯಕ್ಕಾಗಿ ಹಲವು ಪುಸ್ತಕದಂಗಡಿಗಳನ್ನು ಎಡತಾಕಿದವರನ್ನು ನಾನು ಕಂಡಿದ್ದೇನೆ.

ಈ ಕೃತಿಯ ಲಭ್ಯತೆ ಬೇಡಿಕೆಯ ಪ್ರಶ್ನೆ ಮಾತ್ರವಲ್ಲ. ಗೌರವದ ಪ್ರಶ್ನೆ, ಅಭಿಮಾನದ ಪ್ರಶ್ನೆ. ಇಂಥ ಕೃತಿ ಸಹೃದಯ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಅದನ್ನು ಎಲ್ಲ ಕನ್ನಡಿಗರು ಓದುವಂತೆ ಪ್ರೇರೇಪಿಸುವ ಕೆಲಸವನ್ನು ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಮಾಡಬೇಕು. ಕೂಡಲೇ ಸರ್ಕಾರ ಈ ಕೃತಿಯನ್ನು ಮರು ಮುದ್ರಿಸಿ ರಿಯಾಯಿತಿ ದರದಲ್ಲಿ ಎಲ್ಲೆಡೆ ಲಭ್ಯವಾಗುವಂತೆ ಮಾಡಬೇಕು. ಆಯಾ ಪ್ರದೇಶದ ಸಾಂಸ್ಕೃತಿಕ ಅನನ್ಯತೆಯನ್ನು, ಅದರ ವಿವಿಧ ಆಯಾಮಗಳನ್ನು ರಕ್ಷಿಸದ ಸರ್ಕಾರ ಸಂಸ್ಕೃತಿಹೀನ, ಜನರ ಬದುಕನ್ನು ಹಸನಾಗಿಸಲು ಭೌತಿಕ ಅಭಿವೃದ್ಧಿಯೊಂದೇ ಸಾಕಾಗುವುದಿಲ್ಲ, ಬದಲಿಗೆ ಸಾಂಸ್ಕೃತಿಕ ಅಭಿವೃದ್ಧಿಯೂ ಬಹಳ ಮುಖ್ಯ ಎನ್ನುವುದನ್ನು ಆಳುವ ಸರ್ಕಾರ ಅರಿತುಕೊಳ್ಳಬೇಕು.

Comments

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ