* ಈ.ರಮೇಶ್ ನಿಂಬೆಮರದಹಳ್ಳಿ (ಡಿಸೆಂಬರ್ 26, 2012ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ) http://vijaykarnataka.indiatimes.com ಆ ಊರಿನಲ್ಲಿ ಹೊತ್ತು ಮೇಲೇರುವ ಮೊದಲೇ ಜನ ವಿರಳವಾಗುತ್ತಾರೆ. ಸದಾ ಪಿಸುಗುಟ್ಟುವ ಜಗಲಿ ಮೌನವಾಗುತ್ತದೆ. ಗಿಜಿಗುಟ್ಟುವ ಊರ ಮುಂದಿನ ಹೈಕಳ ಅಡ್ಡೆ ಖಾಲಿ ಹೊಡೆಯುತ್ತದೆ. ಇನ್ನು ದನ ಕರುಗಳು ಕೊಟ್ಟಿಗೆ ಸೇರುವ ಗೋಧೂಳಿ ಹೊತ್ತಲ್ಲಿ ಒಂದಷ್ಟು ಧೂಳು, ಧೂಮ, ಸದ್ದು. ಆಮೇಲೆ ಮತ್ತೆ ರಸ್ತೆಗಳು ನಿರ್ಜನ.ಯಾವ ಮನೆಗೆ ಇಣುಕಿದರೂ ಹೂವಿನ ಘಮಲು. ಹರಡಿಕೊಂಡ ಹೂ ರಾಶಿ ನಡುವೆ ಯಂತ್ರದಂತೆ ಸರಸರನೆ ಹೂವು ಕಟ್ಟುವ ಕೈಗಳು. ಇದು ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಗು ಮತ್ತು ಬೈಗಿನ ಸಮಯದಲ್ಲಿ ಕಂಡುಬರುವ ದೃಶ್ಯ. ಈಗ ಆ ಊರಿನ ತುಂಬೆಲ್ಲ ಹೂವಿನ ಪರಿಮಳ. ಎಲ್ಲರ ಬಾಯಲ್ಲೂ ಹೂವಿನ ಮಾತು. ಊರಿಗೆ ಊರೇ ಈಗ ಸೇವಂತಿಗೆಯಲ್ಲಿ ಮುಳುಗಿ ಹೋಗಿದೆ. ಎಲ್ಲಿ ನೋಡಿದರೂ ಹಳದಿ ಚೆಲ್ಲಿದ ಹಾಗೆ ಕಾಣುವ ಸೇವಿಂತಿಗೆ ಹೂವಿನ ತೋಟಗಳು. ಸೇವಂತಿಗೆಯಲ್ಲಿ ಚಾಂದಿನಿ, ಬಿಳಿಹೂವು, ಬೆಳ್ಳಟ್ಟಿ, ಕರ್ನಲ್, ಪಚ್ಚೆ ಮುಂತಾದ ತಳಿಗಳಿವೆ. ಇವುಗಳಲ್ಲಿ ಕೆಲವು ಮಳೆಗಾಲಕ್ಕೆ ಸೂಕ್ತವಾದರೆ ಇನ್ನು ಕೆಲವು ಬೇಸಿಗೆಯ ಒಣ ಹವೆಗೆ ಸೂಕ್ತ, ಕೆಲವು 3 ತಿಂಗಳ ಬೆಳೆ ಮತ್ತೆ ಕೆಲವು 6 ತಿಂಗಳ ಬೆಳೆ. 3 ತಿಂಗಳ ಬೆಳೆಯಾದರೆ ನಾಟಿ ಮಾಡಿದ ಒಂದೂವರೆ ತಿಂಗಳಿಗೆಲ್ಲ ಆದಾಯ ಶುರು. ಮುಂದಿನ ಎರಡು ತಿಂಗಳು ನಿರಂತರ ದುಡಿಮೆ,...