ಭಾರತ ಚಿತ್ರೋದ್ಯಮದ 'ವಿಶ್ವರೂಪ'

ನೋಡಲೇಬೇಕೆನಿಸಿದ ತುರ್ತು...

ವಿಶ್ವರೂಪಂ ವಿವಾದ ಇತ್ಯರ್ಥವಾಗಿದೆ. ಹೀಗಾಗಿ ಚಿತ್ರಕ್ಕೆದುರಾಗಿದ್ದ ವಿಘ್ನ ನಿವಾರಣೆಯಾಗಿದೆ. ಆದರೆ, ಚಿತ್ರದ ಮೇಲೆ ಎದ್ದ 'ವಿವಾದ' ಹುಟ್ಟುಹಾಕಿದ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟೊಂದು ವಿವಾದ ಭುಗಿಲೇಳುವಂಥ ಅಂಶ ಏನಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೆಂದೇ ನಾನು ವಿಶ್ವರೂಪಂ ನೋಡಲು ಹೋದೆ. ಜೊತೆಗೆ ಕಮಲ್‌ ಹಾಸನ್‌ ನಟನೆ ಯಾವಾಗಲೂ ನೀಡುವ ಭರವಸೆ ನನ್ನನ್ನು ಥಿಯೇಟರ್‌ಗೆ ನುಗ್ಗುವಂತೆ ಮಾಡಿತು.

ಯಾವುದರ ವಿಶ್ವರೂಪ?

ವಿಶ್ವರೂಪಂ, ಭಯೋತ್ಪಾದನೆಯನ್ನು ಆಧರಿಸಿದ ಚಿತ್ರ. ಉಗ್ರರು ಆಫ್ಘಾನಿಸ್ತಾನದಲ್ಲಿ ತರಬೇತಿ ಪಡೆದು ಅಮೆರಿಕದ ಮರ್ಮಾಂಗಕ್ಕೆ ಹೊಡೆಯಲು ನ್ಯೂಯಾರ್ಕ್‌ನಲ್ಲಿ ಪರಮಾಣು ಬಾಂಬ್‌ ಇಡುವುದು. ಅದನ್ನು ಕಮಲ್‌ ಹಾಸನ್‌ ಮತ್ತು ಆತನ ತಂಡ ವಿಫಲಗೊಳಿಸುವುದೇ ಚಿತ್ರದ ಸ್ಟೋರಿ.


ಯಾರಿಗೆ ಎಷ್ಟು ಮಾರ್ಕ್ಸ್‌?

ಚಿತ್ರ ನೋಡಿ ಹೊರಬಂದ ನಂತರವೂ ವೀಕ್ಷಕನ ಕಣ್ಣಲ್ಲಿ ನಿಲ್ಲುವವರು ಕಮಲ್‌ ಹಾಸನ್‌ ಮತ್ತು ರಾಹುಲ್‌ಬೋಸ್‌. ವಿಶ್ವನಾಥ್‌ ಕಮ್‌ ತೌಫಿಕ್‌ ಕಮ್‌ ಕಾಶ್ಮೀರಿ ಎಂಬ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳುವ ಕಮಲ್‌ ಹಾಸನ್‌ ರದು ಎಂದಿನಂತೆ ಮಾಗಿದ ನಟನೆ. ಭರತನಾಟ್ಯ ಗುರುವಾಗಿರುವ 'ವಿಶ್ವನಾಥ'ನದು ಅಮೋಘ ನಟನೆ. ಮಾತು, ವರ್ತನೆ, ಆಟಿಟ್ಯೂಡ್‌... ಎಲ್ಲವೂ ಬೆರೆತು ಬೃಹನ್ನಳೆಯೇ ಮೈವೆತ್ತಂತೆ ಕಮಲ್‌ ಕಾಣುತ್ತಾನೆ. ಭಾರತದ ಬೇಹುಗಾರಿಕಾ ಸಂಸ್ಥೆ RAW ಏಜೆಂಟ್‌ ಆಗಿ ಕಮಲ್‌ ಆಕ್ಷನ್‌ ಹೀರೋ. ಭಯೋತ್ಪಾದಕನಾಗಿ ಕಾಣಿಸಿಕೊಳ್ಳುವ 'ಕಾಶ್ಮೀರಿ'ಯಾಗಿ ಕಮಲ್‌ ಹಾಸನ್‌ನದು ಚಾಣಾಕ್ಷ ನಡೆ. ಭರತನಾಟ್ಯ ಗುರುವಾಗಿ 'ಬೃಹನ್ನಳೆ'ಯಾಗಿದ್ದ  ಕಮಲ್‌ ಉಗ್ರರ ಬಂಧಿಯಾದಾಗ ಒಂದು ಕ್ಷಣದಲ್ಲಿ ಇದ್ದಕ್ಕಿದ್ದಂತೆ RAW ಏಜೆಂಟ್‌ ಆಗಿ ಬದಲಾಗುವ ಪ್ರಕ್ರಿಯೆಯಂತೂ ಜಸ್ಟ್‌ ಅಮೇಝಿಂಗ್‌. ಕಮಲ್‌ ಬಾಯಾಳಿ ಹೆಂಡತಿಯಾಗಿ ಪೂಜಾ ಕುಮಾರ್‌ದು ಲವಲವಿಕೆಯ ನಟನೆ. ಉತ್ತಮ ಆಕ್ಟಿಂಗ್‌ ಜೊತೆಗೆ ಚಿತ್ರಕ್ಕೆ ಒಂದಷ್ಟು ಗ್ಲಾಮರ್‌  ತುಂಬಿದ್ದಾರೆ. ಕಮಲ್‌ ಸಹಾಯಕಿಯಾಗಿರುವ ಆಂಡ್ರಿಯಾಳ ಪಾತ್ರಕ್ಕೆ ಪೋಷಣೆ ಸಿಕ್ಕದೆ ಸೊರಗಿದೆ. ಇನ್ನು, ಉಗ್ರರ ನಾಯಕನಾಗಿ ರಾಹುಲ್‌ ಬೋಸ್‌ ಆಕ್ಟಿಂಗ್‌, ನಟನೆ ಅಂತ ಅನ್ನಿಸುವುದೇ ಇಲ್ಲ. ಆತನ ಸೊರಗಿದ ಧ್ವನಿ, ಒಕ್ಕಣ್ಣು ವಿಲನ್‌ ಲುಕ್ಕಿಗೆ ಇನ್ನಷ್ಟು ಕಳೆ ಕೊಟ್ಟಿದೆ.  ಜಿಹಾದಿ ನಾಯಕನಾಗಿರುವ ರಾಹುಲ್‌ ಬೋಸ್‌ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ.

ನಿರೂಪಣೆ, ಸಿನಿಮಾಟೋಗ್ರಫಿ, ತಾಂತ್ರಿಕತೆ ಅಂತೆಲ್ಲ...

ವಿಶ್ವರೂಪಂ ಸಿನಿಮಾ ನೋಡುತ್ತಿದ್ದರೆ ಅದು ಭಾರತೀಯ ಸಿನಿಮಾ ಎಂದು ಯಾವ ಹಂತದಲ್ಲೂ ಅನ್ನಿಸುವುದೇ ಇಲ್ಲ. ಹಾಗನ್ನಿಸುವುದೇ ಆದರೆ ಅದು ಭರತನಾಟ್ಯದ ಸನ್ನಿವೇಶದಲ್ಲಿ ಮಾತ್ರ. ಉಳಿದಂತೆ ಸಂಪೂರ್ಣ ಚಿತ್ರ ಹಾಲಿವುಡ್‌ ಅನುಭವ ಕೊಡುತ್ತದೆ. ಭಾರತೀಯ ಸಿನಿಮಾಗಳ ಯಾವ ಮಸಾಲೆಯೂ ಅಲ್ಲಿಲ್ಲ. ಜೊತೆಗೆ ಹಾಲಿವುಡ್‌ ಚಿತ್ರಗಳು ಬಳಸುವ ಯಾವ ತಾಂತ್ರಿಕತೆಗೂ ಚಿತ್ರದಲ್ಲಿ ಕೊರತೆಯಿಲ್ಲ. ಆಪ್ಘಾನಿಸ್ತಾನದ ಗುಡ್ಡಗಾಡಿನ ದೃಶ್ಯಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಹಿಂಡು ಹಿಂಡಾಗಿ ಹಾರಿ ಬರುವ ಅಮೆರಿಕದ ಯುದ್ಧ ಹೆಲಿಕಾಪ್ಟರ್‌ಗಳು ಉಗ್ರರ ಮೇಲೆ ಗುಂಡಿನ ಮಳೆಗರೆಯುತ್ತವೆ ಮತ್ತು ಜನ ವಾಸಿಸುವ ಮನೆಗಳ ಮೇಲೆ ರಾಕೆಟ್‌ ಸುರಿಸುತ್ತವೆ. ಆ ಮನೆಗಳೆಲ್ಲ ಕ್ಷಣಾರ್ಧದಲ್ಲಿ ಧೂಳಾಗುತ್ತವೆ. ಹೆಲಿಕಾಪ್ಟರ್‌ಗಳಿಂದ ಚಿಮ್ಮುವ ರಾಕೆಟ್‌ಗಳು ಉಗ್ರರ ರುಂಡ, ಮುಂಡಗಳನ್ನು ಚೆಂಡಾಡುವ ದೃಶ್ಯ ಹಲವು ಬೆಸ್ಟ್‌ ಹಾಲಿವುಡ್‌ ಮೂವಿಗಳನ್ನು ನೆನಪಿಗೆ ತರುತ್ತದೆ. ಅದೇ ವೇಳೆಗೆ, ಅಮೆರಿಕದ ಪೈಶಾಚಿಕತೆಯನ್ನು, ಆಕ್ರಮಣಕಾರಿತನವನ್ನು ಅತ್ಯುತ್ತಮವಾಗಿ ತೋರಿಸಲಾಗಿದೆ. ಅಮೆರಿಕದ ಮೇಲೆ ಆಫ್ಘನ್ ಉಗ್ರರು ಕಣ್ಣಿಡುವುದಕ್ಕೂ ಸೂಕ್ತ ಕಾರಣವಿದೆ ಎನ್ನಿಸುತ್ತದೆ.

ಕಮಲ್‌ ಹಾಸನ್‌ ಫೈಟ್‌ ಸಖತ್‌ ಥ್ರಿಲ್‌ ಕೊಡುತ್ತದೆ. ಕಮಲ್‌ರ ರಾಟೆ ಶೈಲಿಯ ಕಿಕ್‌ ನೋಡುಗರಿಗೆ ಮಸ್ತ್‌  ಎಂಟರ್‌ಟೈನ್‌ಮೆಂಟ್‌. ಒಮ್ಮೆ ಹಿಡಿಯಾಗಿ ತೋರಿಸಿ ಮತ್ತದೇ ದೃಶ್ಯವನ್ನು ಬಿಡಿ ಬಿಡಿಯಾಗಿ ತೋರಿಸುವ ನಿರೂಪಣಾ ಕ್ರಮ ಭಾರತೀಯ ಚಿತ್ರೋದ್ಯಮದಲ್ಲೇ ಹೊಸತು. ಅದು ರಿಪೀಟ್‌ ಅಂತ ಅನ್ನಿಸುವುದೇ ಇಲ್ಲ. ಒಂದೇ ದೃಶ್ಯವನ್ನು ಸ್ಟಿಲ್‌ ಮಾಡಿ 360 ಡಿಗ್ರಿ ಕೋನದಲ್ಲಿ ತಿರುಗಿಸುವ 'ಮ್ಯಾಟ್ರಿಕ್ಸ್‌' ಸ್ಟೈಲ್‌ ಇಲ್ಲೂ ಅದ್ಭುತವಾಗಿ ಬಂದಿದೆ.

ವಿಶ್ವದ ಹಲವು ದೇಶಗಳು ಇಂಗ್ಲಿಷ್‌ನಲ್ಲಿ ಚಿತ್ರ ನಿರ್ಮಿಸಿ ಹಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿವೆ. ಆದರೆ ಭಾರತಕ್ಕೆ ಹಾಲಿವುಡ್‌ ಇನ್ನೂ ದೂರ. ಆದರೆ, ವಿಶ್ವರೂಪಂ ಭಾರತದ ಹಾಲಿವುಡ್‌ ಪ್ರವೇಶಕ್ಕೆ ಎಂಟ್ರಿ ಪಾಸ್ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಭಾರತದಿಂದಲೂ ಇಂಗ್ಲಿಷ್‌ನಲ್ಲಿ ಚಿತ್ರಗಳು ರೂಪುಗೊಂಡು ನಂತರ ಅವು ಭಾರತೀಯ ಭಾಷೆಗೆ ಡಬ್‌ ಆಗುವ ಸಾಧ್ಯತೆಯನ್ನು ಈ ಚಿತ್ರ ತೆರೆದಿದೆ.

ಕಾಡುವ ದೃಶ್ಯಗಳು

ಆಫ್ಘಾನಿಸ್ತಾನದಲ್ಲಿನ ಕೌಟುಂಬಿಕ ದೃಶ್ಯಗಳು ಮನಕಲಕುತ್ತವೆ. ಎಳೆಯ ಮಕ್ಕಳಿಗೆ ಕಣ್ಣು ಕಟ್ಟಿ ಮಿಷಿನ್‌ ಗನ್‌ ಮುಟ್ಟಿಸುವುದು, ಬುಲೆಟ್‌ಗಳ ಮಾದರಿಯ ತರಬೇತಿ ಕೊಡುವ ದೃಶ್ಯಗಳು, ಹೇಗೆ ಆಫ್ಘಾನಿಸ್ತಾನದ  ಗುಡ್ಡಗಳಲ್ಲಿ ಮನೆಗಳೇ ಟೆರರ್‌ ಕ್ಯಾಂಪ್‌ಗಳಾಗಿವೆ ಎಂಬುದನ್ನು ಮನಗಾಣಿಸುತ್ತವೆ. ಅಲ್ಲಿನ ಮಕ್ಕಳಿಗೆ 'ಢಂ ಢಂ' ಸದ್ದು ಮೋಜಿನ ವಿಚಾರ. ಅಲ್ಲಿಯ ಯಾವ ತಾಯಿಗೂ ತನ್ನ ಮಗ ಧರ್ಮಕ್ಕಾಗಿ 'ವಾರಿಯರ್‌' ಆಗುವುದು ಬೇಕಿಲ್ಲ. ಅಲ್ಲಿನ ಮಕ್ಕಳಿಗೂ ನಮ್ಮ ಮಕ್ಕಳಂತೇ ಬದುಕುವ ಕನಸು. ಜಿಹಾದ್‌, ದ್ವೇಷ, ಭಯೋತ್ಪಾದನೆ...  ಎನ್ನುವುದೆಲ್ಲ ಧರ್ಮದ ಅಮಲಿಗೆ ಬಿದ್ದ ಪುರಷರ ತೆವಲಷ್ಟೇ ಎನ್ನುವುದನ್ನು ಕಮಲ್‌ ಹಾಸನ್‌ ಸೂಕ್ಷ್ಮವಾಗಿ ತೆರೆದಿಡುತ್ತಾರೆ. ಇಲ್ಲಿ ವಿಶ್ವರೂಪಂ ಹಾಲಿವುಡ್‌ ಚಿತ್ರವನ್ನೂ ಮೀರಿ ನಿಲ್ಲುತ್ತದೆ.

ಉಗ್ರರ ಮುಖಂಡನೊಬ್ಬನ ಬಳಿ, ಯಾರೋ ಇಟ್ಟ, 'ಉಗ್ರರ ಜಾಡು ಹಿಡಿಯುವ ಡಿವೈಸ್‌' ಸಿಕ್ಕಾಗ, ಆತನನ್ನು ಎಲ್ಲರೆದುರು ಉಗ್ರರು ಗಲ್ಲಿಗೇರಿಸುತ್ತಾರೆ; ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಆಗ ಆತನ ಪತ್ನಿಯ ನರಳಾಟ ಮಾನವೀಯತೆಯಾಚೆಗೆ ಯಾವ ಧರ್ಮವೂ ಇಲ್ಲ ಎನ್ನುವುದನ್ನು ಆಫ್ಘನ್‌ ಗುಡ್ಡಗಳಲ್ಲಿ ಮಾರ್ದನಿಸುವಂತೆ ಸಾರಿ ಸಾರಿ ಹೇಳುತ್ತದೆ.

ಬೇಜಾರು ಎನಿಸಿದ್ದು...

ಸಿನಿಮಾದ ಮೊದಲರ್ಧ ಬೋರ್‌ ಹೊಡೆಯುತ್ತದೆ. ಆಕ್ಷನ್‌ ಎಲ್ಲಿದೆ ಎಂದು ಕಾದು ಕುಳಿತುಕೊಳ್ಳುವಂತೆ ಮಾಡುತ್ತದೆ. ಅಯ್ಯೋ... ಇದು ದಶಾವತಾರಂನ ಎರಡನೇ ಭಾಗ ಎಂದು ಭಾವಿಸಿಬಿಡುವಂತೆ ಅಲ್ಲಲ್ಲಿ ಅದರ ನೆರಳು ಕಾಣಿಸುತ್ತದೆ. ಕಿವಿಗೆ ತಟ್ಟುವ ಹಿನ್ನೆಲೆ ಸಂಗೀತವೂ ಅದೇ ಚಿತ್ರವನ್ನು ನೆನಪಿಸುತ್ತದೆ. ಕಮಲ್‌, ಭಾರತದ ಬೇಹುಗಾರಿಕಾ ಏಜೆಂಟ್‌ ಆಗಿ ಭಾರತಕ್ಕೇನು ಮಾಡುತ್ತಾನೆ? ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. 'ವಿಶ್ವರೂಪಂ ಅಮೆರಿಕ ಪರ ಇದೆ' ಎನ್ನುವ ಮಾತಿಗೆ ಹೌದೌದು ಎನ್ನುವಂತೆ ಎರಡು ದೃಶ್ಯಗಳಿವೆ. ಟಿಪಿಕಲ್ ತಮಿಳು ಚಿತ್ರದ ಮಸಾಲೆ ಬಯಸುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ವಿವಾದದ ಕುರಿತು ಒಂದಿಷ್ಟು...

ವಿಶ್ವರೂಪಂ ಸುದ್ದಿಯಾಗಿದ್ದೇ ವಿವಾದದಿಂದ. ಅದರಲ್ಲಿ 'ಧರ್ಮಕ್ಕೆ ಅವಹೇಳನ ಮಾಡಲಾಗಿದೆ' ಎನ್ನುವುದು ಅಲ್ಪಸಂಖ್ಯಾತರ ಕೂಗು. ಆದರೆ ಚಿತ್ರ ನೋಡಿದ ಮೇಲೆ 'ವಿವಾದ' ಎಲ್ಲಿತ್ತು ಎಂದು ತಲೆ ಕೆಡಿಸಿಕೊಳ್ಳುವುದು ಬಿಟ್ಟರೆ ಮತ್ತೇನೂ ಹೊಳೆಯುವುದಿಲ್ಲ.  ಇಡೀ ಚಿತ್ರ ಭಯೋತ್ಪಾದನೆಯನ್ನು ಚಿತ್ರಿಸುವುದರಿಂದ ಕಮಲ್‌ ಗಮನ ಇರುವುದು ಭಯೋತ್ಪಾದನೆಯ ಮೇಲೇ ಹೊರತು ಮುಸ್ಲಿಂ ಧರ್ಮದ ಮೇಲಲ್ಲ ಎನ್ನುವುದು ನಿಚ್ಚಳವಾಗಿ ಕಾಣುತ್ತದೆ. ಜೊತೆಗೆ ಭಯೋತ್ಪಾದನೆಯ ಕುರಿತು ಕಮಲ್‌ ತೋರಿಸುತ್ತಿರುವ ದೃಶ್ಯಗಳು, ನಿರೂಪಣೆ ಹೊಸದೇನಲ್ಲ. ಆದರೆ ಚಿತ್ರದುದ್ದಕ್ಕೂ 'ಅಲ್ಲಾ ಹು ಅಕ್ಬರ್‌' ಎಂದು ಉಗ್ರರ ಬಾಯಲ್ಲಿ ಪದೇ ಪದೇ ಹೇಳಿಸುವುದು ಬೇಡವಾಗಿತ್ತು. ಅದಿಲ್ಲದಿದ್ದರೆ ಚಿತ್ರದ ಕಥೆಗೆ ಯಾವುದೇ ಧಕ್ಕೆ ಬರುತ್ತಿರಲಿಲ್ಲ. ಬಹುಷಃ ಇದೇ ವಿವಾದದ ಕಿಡಿ ಹೊತ್ತಿಸಿರಲಿಕ್ಕೂ ಸಾಕು.

ಫೈನಲ್‌ ವರ್ಡಿಕ್ಟ್‌

ವಿವಾದಗಳಾಚೆಗೆ, ವಿಶ್ವರೂಪಂ, ಕಮಲ್‌ ಹಾಸನ್ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಹೇಳಲು ನನಗಂತೂ ಮುಜುಗರ ಇಲ್ಲ. ಕಮಲ್‌ನಲ್ಲಿರುವ ನಟ ಮಾಗಿದ್ದಾನೆಯೇ ಹೊರತು ಕುಂದಿಲ್ಲ. ಏಕ ಕಾಲದಲ್ಲಿ ಅಷ್ಟೊಂದು ಪಾತ್ರಗಳಿಗೆ ಜೀವ ತುಂಬುವ ಶಕ್ತಿ ತಮಿಳಿನ ಸೂರ್ಯನನ್ನು ಹೊರತುಪಡಿಸಿದರ ಕಮಲ್‌ಗೆ ಮಾತ್ರವೇ ಸಾಧ್ಯ ಎನಿಸುತ್ತದೆ. ಮುಂದೆ ಹಾಲಿವುಡ್‌ ಚಿತ್ರಗಳಿಗೆ ಭಾರತವೇ ನೆಲೆಯಾದರೂ ಅಚ್ಚರಿಪಡಬೇಕಿಲ್ಲ. ಅದಕ್ಕೆ ವಿಶ್ವರೂಪಂ ಚಿತ್ರವೇ ಆರಂಭ ಎನ್ನುವುದು ನನ್ನ ನಂಬಿಕೆ. ಕಮಲ್‌ ಪ್ರಯತ್ನವನ್ನು ಬೆಂಬಲಿಸುವುದಕ್ಕಾದರೂ ಎಲ್ಲರೂ ಒಮ್ಮೆ ನೋಡಲೇಬೇಕಾದ ಚಿತ್ರ ವಿಶ್ವರೂಪಂ.

Comments

  1. ಉಗ್ರರ ಮುಖಂಡನೊಬ್ಬನ ಬಳಿ, ಯಾರೋ ಇಟ್ಟ, 'ಉಗ್ರರ ಜಾಡು ಹಿಡಿಯುವ ಡಿವೈಸ್‌' ಸಿಕ್ಕಾಗ, ಆತನನ್ನು ಎಲ್ಲರೆದುರು ಉಗ್ರರು ಗಲ್ಲಿಗೇರಿಸುತ್ತಾರೆ; ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಆಗ ಆತನ ಪತ್ನಿಯ ನರಳಾಟ ಮಾನವೀಯತೆಯಾಚೆಗೆ ಯಾವ ಧರ್ಮವೂ ಇಲ್ಲ ಎನ್ನುವುದನ್ನು ಆಫ್ಘನ್‌ ಗುಡ್ಡಗಳಲ್ಲಿ ಮಾರ್ದನಿಸುವಂತೆ ಸಾರಿ ಸಾರಿ ಹೇಳುತ್ತದೆ.

    ReplyDelete
  2. ವಿವಾದ ಸೃಷ್ಠಿ ಕಮಲ್ ಗೆ ವರವಾಯ್ತೊ ಶಾಪವಾಯ್ತೊ ಎಂದು ತಿಳಿಯದು ಆದ್ರೆ ಜನರಲ್ಲಿ ಸಿನಿಮಾ ನೋಡುವ ಹುಚ್ಚಂತು ಹೆಚ್ಚಿಸಿತು. ಕಮಲ್ ಈಗಾಗಲೆ ಇಂಗ್ಲೀಷ್ ಸಿನಿಮಾ ನಿರ್ಮಿಸುವುದಾಗಿ ಹೇಳಿದ್ದಾರೆ. ಭಾರತದಲ್ಲೂ ಹಾಲಿವುಡ್ ಕಲರವ ಕಾಣಬಹುದು... ನಿಜಕ್ಕೂ ಇಂತಹ ಸಿನಿಮಾಗಳು ಬೇಕು....

    ReplyDelete

Post a Comment

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ