ಆಧುನಿಕತೆಯೆಂಬ ‘ಆದರ್ಶ’ದ ಬಲೆಯೊಳಗೆ


-ರಮೇಶ್ನಿಂಬೆಮರದಹಳ್ಳಿ
ಬ್ಲರ್ಬ್‌: ಫೀಡಮ್‌, ಪ್ರೈವೆಸಿ, ಐಡೆಂಟಿಟಿ, ಸೆಲ್ಫ್ರೆಸ್ಪೆಕ್ಟ್ಮೇಲ್ನೋಟಕ್ಕೆ ಆದರ್ಶ ಮೌಲ್ಯಗಳಂತೆ ಕಂಡರೂ ಭಾರತೀಯರಿಗೆ ಅಪಾಯಕಾರಿ ಎಂಬುದನ್ನು ಇವತ್ತಿನ ವಿದ್ಯಾಮಾನಗಳೇ ಸಾಕ್ಷೀಕರಿಸುತ್ತವೆ. ಪರಿಕಲ್ಪನೆಗಳನ್ನು ಸೃಜಿಸಿದ ಪಾಶ್ಚಾತ್ಯ ಚಿಂತನೆಯೇ ಇವುಗಳಿಗೆ ವಿರುದ್ಧವಾದ ಫೇಸ್ಬುಕ್ಅನ್ನೂ ಸೃಷ್ಠಿಸಿದೆ.  ಯಾವ ಕಲ್ಪನೆಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅರ್ಥವಿಲ್ಲ. ನಮ್ಮ ಸಂಸ್ಕೃತಿಗೆ ಒಗ್ಗದ, ಸಲ್ಲದ ಪರಿಕಲ್ಪನೆಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ಸಂಘರ್ಷದಲ್ಲಿ ಬದುಕು ಸವೆಸುತ್ತಿದ್ದೇವೆ.
-------------------------------------

ಕಾಲಘಟ್ಟದ ಯುವ ಜನತೆಯನ್ನು ನೋಡಿದರೆ ದೇಶದ ಭವಿಷ್ಯದ ಬಗ್ಗೆ ಆತಂಕವಾಗಲಾರದೇ ಇರದು. ಒಂದು ಕಡೆ ಚುರುಕು, ಕೌಶಲ್ಯ, ಬುದ್ಧಿಮತ್ತೆಯಲ್ಲಿ ವಯಸ್ಸಿನ ಹಂಗಿಲ್ಲದೆ ಬೆಳೆಯುತ್ತಿದ್ದಾರೆ, ಮತ್ತೊಂದು ಕಡೆ ಅಶಿಸ್ತು ಅವರ ಬದುಕಿನ ಮೌಲ್ಯವಾಗುತ್ತಿದೆ; ತಾಳ್ಮೆ ಎಂಬ ಪದಕ್ಕೆ ಇವರ ಬಳಿ ಅರ್ಥವೇ ಇಲ್ಲ; ಇವರೇನಿದ್ದರೂ ಸೂಪರ್ಸಾನಿಕ್ವೇಗ. ಎಲ್ಲವೂ ಕಣ್ರೆಪ್ಪೆ ಬಡಿಯುವಷ್ಟರಲ್ಲಿ ಆಗಿ ಬಿಡಬೇಕು ಎನ್ನುವ ಧಾವಂತ. ನೈತಿಕತೆ ಎನ್ನುವುದನ್ನು ಹಳೆಯ ಕಾಲದ ಗುಜರಿ ವಸ್ತು ಎಂಬಂತಾಗಿದ್ದು, ಯಾರಿಗೂ ಬೇಡವಾದ ವಿಚಾರವಾಗಿದೆ. ದುಶ್ಚಟಗಳು ವರ ಬದುಕಿನ ಅವಿಭಾಜ್ಯ ಅಂಗ ಎನ್ನುವಂತಾಗಿದೆ. ಎಲ್ಲಕ್ಕೂ ಮುಗಿ ಬೀಳುವ, ಎಲ್ಲವನ್ನೂ ಪರೀಕ್ಷಿಸುವ ಹಂಬಲ. ಆದರೆ ಯಾವುದರ ಮೇಲೂ ಪೂರ್ಣ ಆಸಕ್ತಿ ಇಲ್ಲ. ಯಾವುದರಲ್ಲೂ ಪೂರ್ಣ  ಜ್ಞಾನ ಇಲ್ಲ, ಬದಲು ಎಲ್ಲವನ್ನೂ ತಿಳಿದುಕೊಳ್ಳುವ ಹುಚ್ಚು. ಕೆಲವು ವಿಷಯಗಳಲ್ಲಿ ಅತೀವ ಆಸಕ್ತಿ ಹುಟ್ಟಿರುವಂತೆ ಕಂಡರೂ ಅದು ಹೆಪ್ಪುಗಟ್ಟಿದ ಮೋಡದಂತೆ ಕರಗಲು ಹೆಚ್ಚು ಹೊತ್ತೇನು ಬೇಕಾಗಿಲ್ಲ. ಪ್ರೀತಿ, ಪ್ರೆಮಗಳು ಇವರ ಜೀವಾಳ. ಮೊಬೈಲ್ ಇವರ ಆತ್ಮ ಸಂಗಾತಿ. ಇಂಟರ್ನೆಟ್ಬಳಸುವ ಇವರುಟ್ರೂಲಿ ಗ್ಲೋಬಲ್[i], ಬಳಸಲು ಬಾರದವರು ಪಕ್ಕಾ ಲೋಕಲ್‌. ಆಟದ ಮೈದಾನ ಹುಡುಕಿ ಹೋಗುವ ಪುರುಸೊತ್ತು, ವ್ಯವಧಾನ ಇವರಿಗಿಲ್ಲ. ಹೀಗಾಗಿ ಅಂಗಳದ ಆಟಕ್ಕಿಂತ ಮೊಬೈಲ್ಆಟವೇ ಇವರಿಗೆ ಅಚ್ಚುಮೆಚ್ಚು. ಅದರಲ್ಲಿ ಜಗತ್ತನ್ನೇ ಮರೆಯುವಷ್ಟು ತನ್ಮಯತೆ.  ಆದರೆ ಪುಸ್ತಕ ಹಿಡಿದು ಕುಂತರೆ ಕಣ್ರೆಪ್ಪೆಗಳು ಹಾಗೇ ಮುಚ್ಚಿಕೊರ್ಳತ್ತವೆ. ಸಂಗೀತ  ಕೇಳದೇ ಹೋದರೆ ಇವರ ನಾಡಿಗಳು ಮಿಡಿಯುವುದಿಲ್ಲ. ಪುಸ್ತಕ ಓದುವ ಅಭ್ಯಾಸ ಇಲ್ಲದಿದ್ದರೂ ಗೆಳೆಯ, ಗೆಳತಿಯೊಂದಿಗೆ ಲೈಬ್ರರಿಗೆ ಹೋಗುವುದು, ಅಲ್ಲಿ ದೊಡ್ಡ ದೊಡ್ಡ ಪುಸ್ತಕಗಳನ್ನು ತಿರುವಿಹಾಕುವುದು ಒಂಥರಾ ಇಷ್ಟ. ಯಾವುದೇ ಕಾದಂಬರಿ  ಅಥವಾ ಲೇಖಕ ಹೆಚ್ಚು ಸುದ್ದಿಯಾದರೆ (ಉದಾ: ಹ್ಯಾರಿ ಪಾಟರ್ಸರಣಿ, ದಿ ಇಮ್ಮೋರ್ಟಲ್ಸ್ಆಫ್ಮೆಲುಹ, ಚೇತನ್ಭಗತ್‌, ಯಂಡಮೂರಿ, ಕನ್ನಡದಲ್ಲಿ ಎಸ್‌.ಎಲ್ಭೈರಪ್ಪ ಇತ್ಯಾದಿ) ಕಾದಂಬರಿ ಅಥವಾಜನಪ್ರಿಯಲೇಖಕರ ಕೃತಿಗಳನ್ನು ರಾತ್ರಿ, ಹಗಲು ಓದಿ ಮುಗಿಸುವಷ್ಟು ತುಡಿತ. ಆಧ್ಯಾತ್ಮಕ ಲವಲೇಷ ತಿಳಿಯದಿದ್ದರೂ ಓಶೋ, ಸ್ವಾಮಿ ಸುಖಬೋಧಾನಂದ, ಶ್ರೀ ರವಿಶಂಕರ್ಗುರೂಜಿ, ಜಿಡ್ಡು ಕೃಷ್ಣಮೂರ್ತಿ ಮುಂತಾದವರ ಪ್ರವಚನ ಕೇಳುವ, ಇಲ್ಲವೇ ಅವರ ಕೃತಿಗಳನ್ನು ಓದುವುದರಲ್ಲಿ ಬಲುಪ್ರೀತಿ. ಹಾಲಿವುಡ್ ಸೈ-ಫೈ ಮತ್ತು ಆಕ್ಷನ್ಚಿತ್ರಗಳು (ಜೇಮ್ಸ್ಬಾಂಡ್ಮೂವೀಸ್, ಐರನ್ಮ್ಯಾನ್ಸರಣಿ, ಸ್ಪೈಡರ್ಮ್ಯಾನ್‌, ಬ್ಯಾಟ್ಮ್ಯಾನ್ಸರಣಿ, ಸ್ಟಾರ್ವಾರ್ಸ್‌, ಘೋಸ್ಟ್ರೈಡರ್ಇತ್ಯಾದಿ), ರೊಮ್ಯಾಂಟಿಕ್ಹಿಂದಿ ಚಿತ್ರಗಳು ಬಿಡುಗಡೆಯಾದರೆ ಕಾಲೇಜಿಗೆ ಚಕ್ಕರ್ಹಾಕಿಯಾದರೂ ನೋಡಲೇಬೇಕು. ಮೊಬೈಲ್ನಲ್ಲಿ ಹೆಚ್ಚು ಮೆಮೋರಿ ಇಲ್ಲದಿದ್ದರೂ ಹೊಸ ಹೊಸ ಆಪ್ಡೌನ್ಲೋಡ್ಮಾಡಿ ಅದನ್ನು ಪರೀಕ್ಷಿಸದಿದ್ದರೆ ಸಮಾಧಾನವಿಲ್ಲ. ಕನಿಷ್ಟ ಒಂದಾದರೂ ಡೇಟಿಂಗ್ಆಪ್‌ (ಹೊಸ ಮತ್ತು ಹಸಿ ಸಂಬಂಧಗಳಿಗಾಗಿ ತಡಕಾಡುವವರಿಗೆ ನೆರವಾಗುವ ಅಪ್ಲಿಕೇಶನ್‌) ಇಟ್ಟುಕೊಳ್ಳದವನು ಗಾಂಧಿ.
ಅಪ್ಪ, ಅಮ್ಮಂದಿರು ಹಳೆಯ ಗೊಡ್ಡು ಸಂಪ್ರದಾಯಗಳ ಪ್ರತೀಕ; ಏನೂ ತಿಳಿಯದ ಅನಾಗರಿಕ ಅಜ್ಞಾನಿಗಳು. ಇಂಥವರಿಗೆ ಚಳ್ಳೆ ಹಣ್ಣು ತಿನ್ನಿಸುವುದು ಇವರಿಗೆ ನೀರು ಕುಡಿದಷ್ಟೇ ಸಲೀಸು. ಸುಳ್ಳಿನ ನೂಲಿನಲ್ಲಿ ಕಥೆ ಹೆಣೆಯುವುದು ಇವರಿಗೆ ಕರಗತ.
ನೈಜ ಜಗತ್ತು V/S ಮಿಥ್ಯಾ ಜಗತ್ತು[ii]
ಇಂತಿಪ್ಪ ಇಂದಿನ ಯುವಪಡೆ, ಏಕಕಾಲದಲ್ಲಿ ಎರಡೆರಡು ಜಗತ್ತುಗಳಲ್ಲಿ ವಾಸಿಸುತ್ತಿದ್ದಾರೆ. ಒಂದು ಜೀವಿಸುವ, ಒಡನಾಡುವ ಸುತ್ತಮುತ್ತ ಇರುವ ನೈಜ ಜಗತ್ತು ಮತ್ತೊಂದು ಇಂಟರ್ಟ್ನೆಟ್ನಲ್ಲಿ ತೇಲುವ, ಎಲ್ಲವೂ ಇದ್ದಂತೆ ಕಂಡರೂ ಏನೂ ಇಲ್ಲದ ಫೇಸ್ಬುಕ್ಎಂಬ ಮಿಥ್ಯಾ ಜಗತ್ತು. ಜಗತ್ತಿನಲ್ಲಿ ಹೊಸದೊಂದು ಸಮಾಜವೇ ನಿರ್ಮಾಣವಾಗಿದೆ ಎಂದರೂ ತಪ್ಪಿಲ್ಲ. ಎರಡೂ ಜಗತ್ತುಗಳ ನಡುವೆ ಬಹಳಷ್ಟು ಭಿನ್ನತೆಯಿಂದೆ. ಅವುಗಳಿಗೇ ಸೀಮಿತವಾದ ಕೆಲವು ಅನನ್ಯ ಗುಣಗಳಿವೆ. ಹಿಗಾಗಿಯೇ ನಮ್ಮ ಹುಡುಗರು ಅಥವಾ ಹುಡುಗಿಯರು ದ್ವಿಮುಖ ವ್ಯಕ್ತಿತ್ವ (ಸ್ಪ್ಲಿಟ್ಪರ್ಸನಾಲಿಟಿ ಎನ್ನಬಹುದೇನೋ) ಬೆಳೆಸಿಕೊಂಡವರಂತೆ ವರ್ತಿಸುತ್ತಾರೆ. ಎಂದರೆ ಮನೆ, ಕಾಲೇಜು, ಕೆಲಸಗಳಲ್ಲಿ ಇವರ ವರ್ತನೆ ಒಂದು ತೆರನಾಗಿದ್ದರೆ ಅದೇ ಮಿಥ್ಯಾ ಜಗತ್ತಿನಲ್ಲಿ ಇವರ ವರ್ತನೆಗಳು ಪೂರ್ಣ ಭಿನ್ನ. ಇದಕ್ಕೆ ಮೂಲ ಕಾರಣ ಪೇಸ್ಬುಕ್ ವ್ಯಕ್ತಿಯ ನೈಜ ಅಸ್ಮಿತೆಯನ್ನು ಮರೆಮಾಚುವ ಗುಣ. ಒಟ್ಟಾರೆ ಇಂದಿನ ಯುವ ಮಣಿಗಳ ಮಾನಸಿಕ ಒಯ್ದಾಟಕ್ಕೆ, ಅಭದ್ರತೆ, ಖಿನ್ನತೆ, ಮೌಲ್ಯರಹಿತ ಬದುಕು, ಅಶಿಸ್ತಿನ ವರ್ತನೆ ಎಲ್ಲಕ್ಕೂ ಫೇಸ್ಬುಕ್ಅಧ್ಯಯನಯೋಗ್ಯ ವಸ್ತು.
ಲೀವ್ಮಿ ಅಲೋನ್‌...
ಅಲ್ಟ್ರಾ ಮಾರ್ಡನ್ಪರಿಕಲ್ಪನೆಗಳಾದ[iii] ಫೀಡಮ್‌, ಪ್ರೈವೆಸಿ, ಐಡೆಂಟಿಟಿ, ಸೆಲ್ಫ್ರೆಸ್ಪೆಕ್ಟ್ಮುಂತಾದ ಪರಕಲ್ಪನೆಗಳಿಂದ ಇವರೆಲ್ಲ ಎರಕ ಹೊಯ್ದಿದ್ದಾರೆ. ಹೀಗಾಗಿ ಇವರ ಮನಸ್ಸುಗಳಿಗೆ ಸ್ವಲ್ಪವೇ ಘಾಸಿಯಾದರೂ ಕೆರಳಿ ಕೆಂಡವಾಗುತ್ತಾರೆ. ಸ್ವಲ್ಪವೇ ಆವಮಾನವಾದರೂ ಆತ್ಮಹತ್ಯೆ ದಾರಿಯ ಹಿಡಿಯುತ್ತಾರೆ. ಇಲ್ಲವೇ ಖಿನ್ನತೆಯಲ್ಲಿ ಮುಳುಗುತ್ತಾರೆ. ಇದಕ್ಕೆಲ್ಲಾ ಅವರ ಫೇಸ್ಬುಕ್ವಾಲ್ಗಳೇ ಸಾಕ್ಷ್ಯ ನುಡಿಯುತ್ತವೆ. ಇವು (ಮೇಲೆ ಹೇಳಿದ ಆಧುನಿಕ ಪರಿಕಲ್ಪನೆಗಳು) ಮೇಲ್ನೋಟಕ್ಕೆ ಆದರ್ಶ ಮೌಲ್ಯಗಳಂತೆ ಕಂಡರೂ ಭಾರತೀಯರಿಗೆ ಅಪಾಯಕಾರಿ ಎಂಬುದನ್ನು ಇವತ್ತಿನ ಕಾಲಘಟ್ಟದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳೇ ಸಾಕ್ಷೀಕರಿಸುತ್ತವೆ. ಕಲ್ಪನೆಗಳ ಜನ್ಮದಾತ ಕ್ರೈಸ್ತ ಧರ್ಮಶಾಸ್ತ್ರ(ಥಿಯಾಲಜಿ). ಕ್ರಿಶ್ಚಿಯನ್ಧರ್ಮಶಾಸ್ತ್ರ ಚಿಂತಕರು ಗಾಡ್‌(ಕ್ರಿಶ್ಚಿಯಾನಿಟಿಯ ಗಾಡ್ ಕಲ್ಪನೆಗಿಂತ ಭಾರತೀಯರ ದೇವರು ಕಲ್ಪನೆ ಸಂಪೂರ್ಣ ಭಿನ್ನ. ಆದರು ನಾವು ಗಾಡ್ ಅರ್ಥವನ್ನು ದೇವರು ಎಂಬ ಪದದಲ್ಲೇ ಬಳಸುವುದನ್ನು ರೂಢಿ ಮಾಡಿಕೊಂಡಿದ್ದೇವೆ.) ಮತ್ತು ಮನುಷ್ಯನ ನಡುವಿನ ಸಂಬಂಧದ ಸ್ವರೂಪ, ಇವರ ಜವಾಬ್ದಾರಿಗಳನ್ನು ನೂರಾರು ಸಿದ್ಧಾಂತಗಳ ಮೂಲಕ ವಿಶ್ಲೇಷಣೆಗೆ ಒಳಪಡಿಸಿದರು. ಸಿದ್ಧಾಂಗಳ ಮಂಥನಗಳಲ್ಲಿ ಹುಟ್ಟಿದ ಕೂಸುಗಳೇ ಪರಿಕಲ್ಪನೆಗಳು. ( ಕಲ್ಪನೆಗಳನ್ನು ಸಮುದ್ರ ಮಂಥನದಿಂದ ಹುಟ್ಟಿದ ಹಾಲಾಹಲ ಮತ್ತು  ಅಮೃತದಂತೆ ಎಂದು ಅರ್ಥೈಸಿಕೊಳ್ಳಬಹುದು.) ನಂತರ ಪರಿಕಲ್ಪನೆಗಳು ಪ್ರಾಟಸ್ಟೆಂಟ್ಚಳುವಳಿಯ ನಂತರ ಮನುಕುಲದ ಆದರ್ಶ ಮೌಲ್ಯಗಳಾಗಿ ಜಗತ್ತಿನಾದ್ಯಂತ ಪ್ರಚುರಕ್ಕೆ ಬಂದವು. ಯಾವ ಕಲ್ಪನೆಗಳೂ ಅವುಗಳ ಮೂ ಅರ್ಥದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಬಳಕೆಯಲ್ಲಿ ಇರಲಿಲ್ಲ. ಎಂದರೆ ಇವರೆಲ್ಲ ನಮ್ಮ ಸಂಸ್ಕೃತಿಗೆ ಒಗ್ಗದ, ಸಲ್ಲದ ಪರಿಕಲ್ಪನೆಗಳಿಗೆ ತಮ್ಮನ್ನು ಒಡ್ಡಿಕೊಂಡು ಮಾನಸಿಕ ಸಂಘರ್ಷದಲ್ಲಿ ಬದುಕು ಸವೆಸುತ್ತಿದ್ದಾರೆ.
ಫ್ರೀಡಮ್ಕಲ್ಪನೆಯನ್ನು ಅತಿಯಾಗಿ ಆಶ್ರಯಿಸಿರುವ ಯುವಜನತೆಗೆ ತಂದೆ-ತಾಯಿಯ ಅಂಕುಶ ಅವರ ಸ್ವಾತಂತ್ರ್ಯ ಹರಣವಾಗಿ ಕಾಣುತ್ತಿದೆ. ಅವರು ನೋನಿಲ್ಲಿದ್ದಾಗ, ಯಾವುದೋ ಆತಂಕದಲ್ಲಿ ಕೊರಗುತ್ತಿದ್ದಾಗ ಅಪ್ಪ-ಅಮ್ಮ ಬಂದು ಅದನ್ನು ವಿಚಾರಿಸುವುದು, ಸಮಾಧಾನ ಹೇಳುವುದನ್ನು ಅವರು ತಮ್ಮ ಪ್ರೈವೆಸಿಗೆ ಬಂದೊದಗಿದ ಧಕ್ಕೆ ಎಂದೇ ಭಾವಿಸುತ್ತಾರೆ (ಯಾವಾಗಲೂ ಅಪ್ಪ-ಅಮ್ಮನಿಗೆ ಲೀವ್ಮಿ ಅಲೋನ್ಎಂದು ಕೂಗಾಡುವುದೇ ಭಾವದ ಸುಳಿವು). ಅಪ್ಪ-ಅಮ್ಮ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು ಎಂದರೆ ಅವರ ಐಡೆಂಟಿಟಿಯನ್ನು ಕಳೆದುಕೊಂಡಂತೆ. ಕಾರಣಕ್ಕಾಗಿಯೇ ಇವರು ಯಾವುದೇ ಕೆಲಸವನ್ನು ತಮ್ಮದೇ ಸ್ಟೈಲ್ನಲ್ಲಿ ಮಾಡಲು ಬಯಸುತ್ತಾರೆ.
ನೆರಳ ನಂಬಿ ಕೆಟ್ಟೆವಯ್ಯಾ...
ನೈಜ ಜಗತ್ತಿನಲ್ಲಿ ಪ್ರೈವೆಸಿ ಒಂದು ಮೌಲ್ಯವಾದರೆ ಅದೇ ಮಿಥ್ಯಾ ಜಗತ್ತಾಗಿರುವ ಫೇಸ್ಬುಕ್ನಲ್ಲಿ ಅದೊಂದು ಪೂರ್ಣ ಅಪಮೌಲ್ಯ. ಎಂದರೆ, ಫೇಸ್ಬುಕ್ ಒಟ್ಟು ರಚನೆ ಮತ್ತು ಅದರ ಕಾರ್ಯವೈಖರಿ ಪ್ರೈವೆಸಿಗೆ ವಿರುದ್ಧವಾಗಿಯೇ ಇದೆ. ಎಲ್ಲರಿಗೂ ಎಲ್ಲವನ್ನು ತಿಳಿದುಕೊಳ್ಳುವ ಹಕ್ಕಿದೆ. ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳುವುದು ಎಲ್ಲರ ಹಕ್ಕು ಮತ್ತು ಅದು ಅಗತ್ಯ ಎಂಬ ಧೋರಣೆ ಫೇಸ್ಬಕ್ಸೃಷ್ಟಿಯ ಅಡಿಪಾಯವಾಗಿರುವುದು ಕಂಡುಬರುತ್ತದೆ. ಅಲ್ಲಿ ಪ್ರೈವೆಸಿ ಎಂಬುದಕ್ಕೆ ಅರ್ಥವೇ ಇಲ್ಲ. ಎಲ್ಲವನ್ನೂಜಗತ್ತಿನೊಂದಿಗೆಹಂಚಿಕೊಂಡರೇ ಸಮಧಾನ. ಫೇಸ್ಬುಕ್ಎಲ್ಲೆಡೆ ಪ್ರಚುರಕ್ಕೆ ಬಂದ ಆರಂಭದ ದಿನಗಳಲ್ಲಿ ಹೀಗೆ ಎಲ್ಲವನ್ನೂ ಹಂಚಿಕೊಳ್ಳುವುದುಕ್ಕೆ ಒಂದಷ್ಟು ಮಿತಿಯಾದರೂ ಇತ್ತು. ಅದರೀಗ ಅಲ್ಲಿನ ಬಳಕೆದಾರರ (ಬಹುತೇಕ ಯುವಕರ) ಟ್ರೆಂಡ್ಬದಲಾಗಿದೆ ಅಥವಾ ಬದಲಾಗುವಂತೆ ಫೇಸ್ಬುಕ್ರಚನೆಯನ್ನು ಮಾರ್ಪಡಿಸಲಾಗಿದೆ.
ಒಬ್ಬ ದಿನದ ಯಾವುದೇ ಹೊತ್ತಲ್ಲಿ ತಾನು ಅನುಭವಿಸುವ ಭಾವನೆಯನ್ನ ತನ್ನಜಗತ್ತಿನೊಂದಿಗೆ ಹಂಚಿಕೊಳ್ಳಲು ಫೇಸ್ಬುಕ್ಅವಕಾಶ ಕಲ್ಪಿಸಿಕೊಡುತ್ತದೆ. ತನಗೆ ಬೇಜಾರಾಗಿದೆ ಎಂತಾದರೆ ಇವರ ಮುಖದಲ್ಲಿ ನಗು ತುಂಬಲು ಫೇಸ್ಬುಕ್ನಲ್ಲಿ ನೂರಾರು ಮಂದಿ ಇದ್ದಾರೆ. ಆತಂಕವಿದೆ ಎಂದಾದರೆ ಧೈರ್ಯ ಹೇಳುವವರರು ಮತ್ತಷ್ಟು ಮಂದಿ. ಯಾವುದೋ ಕೆಲಸಕ್ಕೆ ಮಾರ್ಗದರ್ಶನ ಬೇಕೆಂದಾ ಸಲಹೆ ಕೊಡುವ ಸಾವಿರ ಜನ ಅಲ್ಲುಂಟು. ಒಂಟಿ ಎಂದು ಭಾವಿಸುವವರಿಗೆ ನಾವಿದ್ದೇವೆ ಎನ್ನುವವರು ಮತ್ತೂ ಜಾಸ್ತಿ (ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ). ಯಾವುದೋ ಘನ ಕಾರ್ಯ ಮಾಡಿದ್ದಕ್ಕೆ ಅಭಿನಂದನೆಗಳ ಸುರಿಮಳೆ. ಹುಟ್ಟು ಹಬ್ಬದ ನೆನಪೇ ಇಲ್ಲದವರಿಗೆ ಶುಭಾಶಯ ಹೇಳುವ ನೂರಾರುಗೆಳೆಯರು. ಹೀಗೆ ಯಾವುದೇ ಭಾವನೆಗೂ ಸ್ಪಂದಿಸುವ ಕುರುಣಾಮಯಿಗಳು ಅಲ್ಲಿ ಸಹಸ್ರ. ಆದರೆ, ಭಾರತೀಯ ಸಂಸ್ಕೃತಿ ಇದಕ್ಕೆ ತದ್ವಿರುದ್ಧ. ಎಲ್ಲ ವಿಚಾರಗಳನ್ನು ಎಲ್ಲರ ಬಳಿಯೂ ಹೇಳಿಕೊಳ್ಳುವುದು ಸೂಕ್ತವಲ್ಲ (ಎಂದರೆ ಹೇಳಬೇಕಾದ್ದನ್ನು ಹೇಳಬೇಕಾದವರ ಬಳಿ ಮಾತ್ರವೇ ಹೇಳಿಕೊಳ್ಳಬೇಕು[iv]) ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲ ಗುಣ. ನೆಂಟರಿಸ್ಟರು, ಬಂಧು-ಬಳಗ,  ಸ್ನೇಹಿತರು ಮನೆಗೆ ಬಂದು ನಿಮ್ಮ ಅಜ್ಜಿಯೋ, ತಾತನೋ ಅಲ್ಲಿದ್ದಾಗ ಯಾವುದಾದರೂ ಖಾಸಗಿ ವಿಚಾರವೊಂದನ್ನು ಹೇಳಿ ನೋಡಿ. ನಿಮ್ಮ ಹಿರಿಯರಿಂದ ಬೈಗುಳ ಕಟ್ಟಿಟ್ಟ ಬುತ್ತಿ.  ಖಾಸಗಿ ವಿಚಾರಗಳು ಖಾಸಗಿಯಾಗಿಯೇ ಉಳಿಯಬೇಕು ಎನ್ನುವುದು ನಮ್ಮ ಹಿರಿಯರ ವರ್ತನೆಗಳ ಹಿಂದಿರುವ ಮೌಲ್ಯ.
ಇದು ಸೆಲ್ಫಿ ಝಮಾನಾ
ಫೇಸ್ಬುಕ್ನಲ್ಲಿ ಫೋಟೋ ಹಾಕಲೆಂದೇ ವಿಶಿಷ್ಟ ಭಂಗಿಯ, ವಿಶಿಷ್ಟ ಸಂದರ್ಭದ ಫೋಟೋ ತೆಗೆಯುವುದು ಈಗ ಕಾಮನ್ಟ್ರೆಂಡ್‌. ಇನ್ನು ಸೆಲ್ಫಿಗಳದ್ದು[v] (ತಮ್ಮ ಫೋಟೋಗಳನ್ನು ತಾವೇ ತೆಗೆದುಕೊಳ್ಳುವುದು) ಒಂದು ರೋಚಕ ಕಥೆ. ಬಾತ್ರೂಮ್ನಲ್ಲಿ, ಬೆಡ್ರೂಮ್ನಲ್ಲಿ, ಕಿಚನ್ನಲ್ಲಿ, ಓದಿನ ಮನೆಯಲ್ಲಿ, ಬೈಕ್ನಲ್ಲಿ ಹೀಗೆ ನಾನಾ ಸ್ಥಳಗಳಲ್ಲಿ, ನಾನಾ ಭಂಗಿಗಳಲ್ಲಿ ತೆಗೆದ ಲಕ್ಷಾಂತರ ಸೆಲ್ಫಿಗಳು ಫೇಸ್ಬುಕ್ವಾಲ್ಗೆ ಅಂಟಿಕೊಂಡಿವೆ. ಯಾರೇ ಸ್ನೇಹಿತರು ಭೇಟಿಯಾಗಲಿ, ಯಾರೇ ದೊಡ್ಡ ವ್ಯಕ್ತಿಗಳು ಎನಿಸಿಕೊಂಡವರು ಎಲ್ಲಾದರೂ ಸಿಗಲಿ ಅವರೊಂದಿಗೆ ಒಂದು ಸೆಲ್ಫಿ ತೆಗೆದು ಫೇಸ್ಬುಕ್ಗೆ ಹಾಕಿದರೆ ತಮ್ಮ ಘನತೆ ಹೆಚ್ಚಿತು ಎನ್ನುವ  ಭ್ರಮೆ. ಯುವಪಡೆಯ ಫೇಸ್ಬುಕ್ಓಟ ಇಲ್ಲಿಗೇ ನಿಲ್ಲುವುದಿಲ್ಲ. ಹೇಳುತ್ತಾ ಹೋದರೆ ಮುಗಿಯುವುದೂ ಇಲ್ಲ. ಆದರೆ, ಫೇಸ್ಬುಕ್ನಿಂದ ಆಗುತ್ತಿರುವ ಅನುಕೂಲಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವುದನ್ನು ಬಹುಷಃ ಯಾರೂ ಅಲ್ಲಗಳೆಯಲಾರರು.
ಒಟ್ಟಿನಲ್ಲಿ ಇವತ್ತಿನ ಯುವ ಜನತೆ ಆಧುನಿಕತೆ ಹುಟ್ಟುಹಾಕಿದಆದರ್ಶದಲ್ಲಿ ಕಳೆಹುಹೋಗುತ್ತಿರುವ ಬಗ್ಗೆ ಎಚ್ಚರ ವಹಿಸಬೇಕಿದೆ. ಶಿಸ್ತು, ಸಂಯಮದ ಬದುಕಿನಲ್ಲಿ ಅರ್ಥವಿದೆ ಎನ್ನುವುದು ಮನವರಿಕೆಯಾಗಬೇಕಿದೆ. ಗುರು-ಹಿರಿಯನ್ನು ಗೌರವಿಸುವುದು, ಅವನ ಅನುಭವಿ ಮಾತುಗಳಿಗೆ ಕಿವಿಗೊಡುವುದು ಬದುಕಿನ ಅತ್ಯುನ್ನತ ಮೌಲ್ಯ ಎನ್ನುವದನ್ನು ಅರಿಯಬೇಕಿದೆ. ಇವೆಲ್ಲಕ್ಕೂ ಮೊದಲು ನಮ್ಮ ಪೂರ್ವಜರ ಬದುಕಿನಲ್ಲಿ ಒಂದು ಸುಂದರ, ಅರ್ಥಪೂರ್ಣ ಬದುಕಿಗೆ ಬೇಕಾದ ಎಲ್ಲವೂ ಇದೆ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು ನಂತರ ಉಳಿದ ಮೌಲ್ಯಗಳು ತಾವಾಗಿಯೇ ನಮ್ಮ ಬದುಕಿನ ಭಾಗವಾಗುತ್ತವೆ.



[i] ಇಲ್ಲಿ ಗ್ಲೋಬಲ್‌ ಎಂಬ ಪದ ಭೌಗೋಳಿಕ ವ್ಯಾಪ್ತಿಯನ್ನು ಹೇಳುತ್ತಿಲ್ಲ. ಬದಲಿಗೆ, ಆಧುನಿಕ ಮೌಲ್ಯವನ್ನು ಧ್ವನಿಸುತ್ತಿದೆ. ಎಂದರೆ ಆಧುನಿಕತೆಯಿಂದ ಚಾಲ್ತಿಗೆ ಬಂದ ಹೊಸ ಮೌಲ್ಯಗಳನ್ನು ಸಂಕೇತಿಸುತ್ತದೆ.
[ii]  ಮಿಥ್ಯಾ ಜಗತ್ತು ಎನ್ನುವುದು ವರ್ಚುಯಲ್‌ ಎಂಬರ್ಥದಲ್ಲಿ ಬಳಸಿದ್ದೇನೆ. ಇಲ್ಲಿ ಮಿಥ್ಯಾ ಜಗತ್ತು ಎಂದರೆ ಫೇಸ್‌ಬುಕ್‌. ಇದೊಂದು ಹೊಸದೇ ಜಗತ್ತು ಎಂದು ಭಾವಿಸುವಂತೆ ಇಲ್ಲಿನ ಜನರ ವರ್ತನೆಗಳು ಕಂಡುಬರುತ್ತವೆ. ಫೇಸ್‌ಬುಕ್‌ನಲ್ಲಿ ಜಗತ್ತಿನಾದ್ಯಂತ ಕೋಟ್ಯಂತರ ಸಂಖ್ಯೆಯ ಬಳಕೆದಾರರಿದ್ದಾರೆ. ಬೃಹತ್‌ ಪ್ರಮಾಣದ ಸಮುದಾಯವೇ ಅಲ್ಲಿದ್ದರೂ ಅದೊಂದು ಮಿಥ್ಯಾ ಜಗತ್ತು. ಯಾಕೆಂದರೆ ಅದು ಯಾವಾಗ ಬೇಕಾದರೂ ಕುಸಿದು ಬೀಳಬಹುದು.
[iii]  ಕ್ರಿಶ್ಚಿಯನಿಟಿಯ ಜೀವಾಳವಾಗಿರುವ ಪರಿಕಲ್ಪನೆಗಳಿಗೆ ಕನ್ನಡದಲ್ಲಿ ಸ್ವಾತಂತ್ರ್ಯ, ಖಾಸಗಿತನ, ಅಸ್ಮಿತೆ ಮತ್ತು ಆತ್ಮಗೌರವ ಅಥವಾ ಸ್ವಾಭಿಮಾನ ಎಂಬ ಅನುವಾದಗಳು ಬಳಕೆಯಲ್ಲಿವೆಯಾದರೂ ಇವು ಪರಿಕಲ್ಪನೆಗಳ ಮೂಲ ಅರ್ಥವನ್ನು ಧ್ವನಿಸುವಲ್ಲಿ ಸೋಲುತ್ತವೆ. ಹಾಗಾಗಿ ಅವುಗಳನ್ನು ಮೂಲ ಇಂಗ್ಲಿಷ್‌ ರೂಪದಲ್ಲೇ ಬಳಸಲಾಗಿದೆ. ಈ ಕುರಿತು ಹೆಚ್ಚಿನ ಅರಿವಿಗೆ ಎಸ್‌.ಎನ್‌ ಬಾಲಗಂಗಾಧರ ಅವರ ‘ಪೂರ್ವಾವಲೋಕನ’ ಕೃತಿ ನೋಡಬಹುದು.
[iv]  ಕುಟುಂಬದ ಮಾನ ಬೀದಿಗೆ ಬರಬಾರದು ಎಂಬುದು ಇದರ ಸಾರಾಂಶ. ಖಾಸಗಿ ಸಮಸ್ಯೆಗಳು ಸಾರ್ವಜನಿಕ ವೇದಿಕೆಗೆ ಬಂದಷ್ಟೂ ಅವುಗಳ ಪರಿಹಾರದ ಮಾರ್ಗವೂ ಕ್ಷೀಣಿಸುತ್ತಾ ಹೋಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ಇದಕ್ಕೆ ನಾವು ಇತ್ತೀಚೆಗೆ ಟಿವಿ ಮಾಧ್ಯಮಗಳಲ್ಲಿ  ಚರ್ಚೆಯಾಗುತ್ತಿರುವ ಸೆಲೆಬ್ರಿಟಿಗಳ ದಾಂಪತ್ಯದ ಬಿರುಕುಗಳೇ ಉದಾಹರಣೆ.
[v] ಸೆಲ್ಫಿ ಎನ್ನುವ ಪದ ಸೆಲ್ಫ್‌ ಎನ್ನುವ ಮೂಲ ಪದದಿಂತ ಚಾಲ್ತಿಗೆ ಬಂದಿದೆ. ಎಂದರೆ ತನ್ನ ಫೋಟೋವನ್ನು ತಾವೇ ತೆಗೆದುಕೊಳ್ಳುವುದು. ಇದು ಚಲಾವಣೆಗೆ ಬಂದು ಕೆಲವೇ ವರ್ಷಗಳಾಗಿದ್ದರೂ ಈ ಅತ್ಯಂತ ಜನಪ್ರಿಯವಾಗಿದೆ. ಆದರೆ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಎಷ್ಟೋ ಜನ ಪ್ರಾಣ ತೆತ್ತಿದ್ದಾರೆ.

Comments

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ