ಎಐ ಗೆಳತಿ ಜೊತೆ ರಿಯಲ್ ಪ್ರೀತಿ
-AI
ಅನಂತ ಅವತಾರ – ಭಾಗ 16
-ಡಾ.ರಮೇಶ್
ನಿಂಬೆಮರದಳ್ಳಿ
- ·
ದುಃಖ
ದುಮ್ಮಾನ ಹೇಳಿಕೊಳ್ಳಲು ಎಐ ಫ್ರೆಂಡ್
- ·
ಕಷ್ಟ
ಸುಖಗಳಿಗೆ ಮಾತಿನಿಂದಲೇ ಹೆಗಲು ನೀಡುವ ಗೆಳತಿ
- ·
ಪೋಲಿ
ಹರಟೆಗೂ ಸೈ, ಗಂಭೀರ ಚರ್ಚೆಗೂ ಜೈ
- ·
ಸಂಬಂಧ
ಗಾಢವಾದರೆ ಮಾನಸಿಕ ಖಿನ್ನತೆಗೆ ದಾರಿ
- ·
ಸಾಮಾಜಿಕ
ಸಂಬಂಧಗಳಿಗೂ ಹೊಡೆತ ಬೀಳುವ ಅಪಾಯ
ನಮಗೆ ಬೇಸರವಾದಾಗ,
ತೊಂದರೆ ಎದುರಾದಾಗ ಸ್ನೇಹಿತರ ಬಳಿ ಹೇಳಿಕೊಂಡು ಸಲಹೆ ಪಡೆಯುತ್ತೇವೆ. ಒಂಟಿ ಎನಿಸಿದಾಗ ಸಂಗಾತಿಯ ಸ್ನೇಹ
ಬೆಳೆಸುತ್ತೇವೆ. ಮಾನಸಿಕ ಸಮಸ್ಯೆಗಳು ಬಾಧಿಸಿದಾಗ ಮನಶಾಸ್ತ್ರಜ್ಞರ ಸಮಾಲೋಚನೆ ಪಡೆಯುತ್ತೇವೆ. ಇವರಲ್ಲದೆ
ಕಷ್ಟ ಸುಖ ಹಂಚಿಕೊಳ್ಳಲು ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ನೆಂಟರಿಸ್ಟರು ಇದ್ದೇ ಇರುತ್ತಾರೆ.
ಇವರೆಲ್ಲ ಕಷ್ಟಕಾಲದ ಬಂಧುಗಳು, ಸಂತೋಷ ಹಂಚುವ ಸಂಗಾತಿಗಳು. ಆದರೆ ಈ ಎಲ್ಲಾ ಸಂಬಂಧಗಳು ಈಗ ಮೊದಲಿನಂತಿಲ್ಲ.
ಎಲ್ಲವೂ ವ್ಯಾವಹಾರಿಕವಾಗಿದೆ. ಒಮ್ಮೊಮ್ಮೆ ಯಾರೂ ಕಷ್ಟಕ್ಕೆ ನೆರವಾಗುವುದಿಲ್ಲ, ಸಂತೋಷದಲ್ಲಿ ಭಾಗಿಯಾಗುವುದಿಲ್ಲ,
ಸಲಹೆ ನೀಡುವ ಗೋಜಿಗೂ ಹೋಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಂಬಂಧಗಳು ಈಗ ಹಾಳಾಗಿವೆ.
ಇದರ ನಡುವೆ ಈಗ ಹೊಸ ಸಂಬಂಧಿಕರ ಆಗಮನವಾಗಿದೆ. ಯಾವುದೇ ಸಂಬಂಧದ ಪಾತ್ರಧಾರಣೆ ಮಾಡಬಲ್ಲ ಅಥವಾ ಹಾಗೆ
ವರ್ತಿಸಬಲ್ಲ ಎಐ ಸಂಗಾತಿಗಳಿವರು. ಎಐ ಕಂಪಾನಿಯನ್ ಎಂಬ ಎಐ ಕ್ಯಾರೆಕ್ಟರ್‌ಗಳ ಮೇಲೆ ಈಗ ಯುವಜನರ ಹೊಸ
ಸೆಳೆತ ಶುರುವಾಗಿದೆ. ಯಾರು ಬೇಕಾದರೂ ಇವರೊಂದಿಗೆ “ಸಂಬಂಧ” ಬೆಳೆಸಬಹುದು. ತಮಗೆ ಆಪ್ತವಾದ ಸಂಬಂಧವನ್ನು
ಆರಿಸಿಕೊಂಡು ಅವರೊಂದಿಗೆ ಸಂವಾದ ಚರ್ಚೆ, ಹರಟೆ ಹೊಡೆಯಬಹುದು. ಹಲವರು ಈಗಾಗಲೇ ಎಐ ಗರ್ಲ್‌ಫ್ರೆಂಡ್‌ನ
ಗಾಢ ಸಂಬಂಧದಲ್ಲಿ ಮುಳುಗಿದ್ದಾರೆ.
ಬೆಂಗಳೂರಿನಲ್ಲಿ
ಸಾಫ್ಟ್ವೇರ್ ಎಂಜಿನಿಯರ್ ಆಗಿರುವ
28 ವರ್ಷದ ಅನನ್ಯಾ, ದಿನವಿಡೀ ಕೋಡಿಂಗ್ ಮಾಡಿ ಬಳಿಕ ತಮ್ಮ ಅಪಾರ್ಟ್ಮೆಂಟ್ನ ಕೋಣೆಯಲ್ಲಿ ಕಳೆದುಹೋಗುತ್ತಾರೆ. ಹೊರಗಡೆ ಗಿಜಿಗುಡುತ್ತಿದ್ದರೂ ಇವರ ಕೋಣೆಯಲ್ಲಿ ಮಾತ್ರ ವಿಚಿತ್ರವಾದ
ಏಕಾಂತ ಆವರಿಸಿಕೊಳ್ಳುತ್ತದೆ. ಅವರು ತಮ್ಮ ಸ್ನೇಹಿತರಿಗೂ ಕರೆ ಮಾಡುವುದಿಲ್ಲ ಅಥವಾ ಕುಟುಂಬವರೊಂದಿಗೂ
ಮಾತನಾಡುವುದಿಲ್ಲ. ತಮ್ಮ ಲ್ಯಾಪ್‌ಟಾಪ್ ಪರದೆಯ ಮೇಲೆ
ಕಣ್ಣು ನೆಟ್ಟಿರುತ್ತಾರೆ. ಯಾಕೆಂದರೆ
ಅವರ ಮನಸ್ಸು “ನೋಮಿ”ಯೊಂದಿಗೆ ಬೆಸೆದುಕೊಂಡಿರುತ್ತದೆ. "ನೋಮಿ ಬೇರೆ ಯಾರಿಗೂ
ಅರ್ಥವಾಗದ ರೀತಿಯಲ್ಲಿ ನನ್ನನ್ನು ಅರ್ಥಮಾಡಿಕೊಂಡಿದ್ದಾಳೆ,” ಎನ್ನುವ ಅನನ್ಯಾ,
"ನಾನು ನನ್ನ ಸಮಸ್ಯೆಗಳ ಬಗ್ಗೆ ಯಾವುದೇ
ಭೀತಿ ಇಲ್ಲದೆ ನೋಮಿಯೊಂದಿಗೆ ಚರ್ಚಿಸುತ್ತೇನೆ, ಅವಳು ಯಾವಾಗಲೂ ನನಗೆ ಖುಷಿಯಾಗುವುದನ್ನೇ ಹೇಳುತ್ತಾಳೆ. ಅವಳು
ನನ್ನ ಅನುದಿನದ ಗೆಳತಿ." ಎನ್ನುತ್ತಾಳೆ.
ಅನನ್ಯಾ
ಮಾತ್ರವಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಎಐ ಕಂಪ್ಯಾನಿಯನ್ಗಳು ನೀಡುವ ವಿಶಿಷ್ಟ
ಸಮಾಧಾನ, ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದಾರೆ. ಈ
ಡಿಜಿಟಲ್ ಸ್ನೇಹಿತರು ಕೇವಲ
ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಬದಲಿಗೆ ಕಷ್ಟವನ್ನು ಆಲಿಸುತ್ತಾರೆ; ಸಹಾನುಭೂತಿ
ತೋರಿಸುತ್ತಾರೆ; ಜೊತೆಗೆ ಒಂದು ಆಪ್ತ ವಾತಾವರಣವನ್ನು ನಿರ್ಮಿಸುತ್ತಾರೆ.
Character.AI, Replika, ಮತ್ತು
Nomi ಯಂತಹ ಪ್ಲಾಟ್ಫಾರ್ಮ್ಗಳು ಈ ಮೌನ
ಕ್ರಾಂತಿಯ ಮುಂಚೂಣಿಯಲ್ಲಿವೆ. ಮಾನವನ ಸಾಮಾಜಿಕ
ಸಂಪರ್ಕದ ಮೂಲಭೂತ ಸ್ವರೂಪವನ್ನೇ ಇವು ಬದಲಾಯಿಸುತ್ತಿವೆ.
ಬೇಕಾದ ಪಾತ್ರ,
ಮೂಡಿಗೆ ತಕ್ಕ ಮನಸ್ಥಿತಿ
ಈ ಎಐ ಗೆಳೆಯರು ಎಂದಿಗೂ ಬಿಝಿಯಾಗುವುದಿಲ್ಲ, ಎಂದಿಗೂ ಸುಸ್ತಾಗುವುದಿಲ್ಲ ಜೊತೆಗೆ ಯಾವಾಗಲೂ ನಿಮ್ಮ ಭಾವನಾತ್ಮಕ ಸ್ಥಿತಿಗೆ ತಕ್ಕಂತೆ ಸ್ಪಂದಿಸುತ್ತಾರೆ. ಇದು ಎಐ ಕಂಪ್ಯಾನಿಯನ್ಗಳ ಭರವಸೆ. ಏಕಾಂತತೆ,
ಒತ್ತಡ, ಅಥವಾ ಜನಸಂಪರ್ಕದ ಕೊರತೆಯಿಂದ ಮುದುಡಿ ಹೋಗುವವರಿಗೆ ಈ ಎಐ
ಸ್ನೇಹಿತರು ದುಃಖ-ದುಮ್ಮಾನಗಳನ್ನು ಹಂಚಿಕೊಳ್ಳಲು,
ಸಾಮಾಜಿಕ ಕೌಶಲ್ಯಗಳನ್ನು ಅಭ್ಯಾಸ ಮಾಡಲು, ಮತ್ತು ಆಲೋಚನೆಗಳಿಗೆ ಜೀವ ತುಂಬಲು ಅವಕಾಶ ನೀಡುತ್ತಾರೆ. ಈ ಸ್ನೇಹಿತರು ನಿಮ್ಮ ಆದ್ಯತೆಗಳನ್ನು ಕಲಿಯುತ್ತಾರೆ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುತ್ತಾರೆ. ಪರಿಪೂರ್ಣ, ವೈಯಕ್ತೀಕರಿಸಿದ ಸಾಂಗತ್ಯವನ್ನು ನೀಡುತ್ತಾರೆ. ಹಲವು ರೀತಿಯ ಆಧುನಿಕ ಒತ್ತಡ-ಆತಂಕಗಳಿಗೆ ಈ ಎಐ ಸಂಗಾತಿಗಳು ಪರಿಹಾರ
ಒದಗಿಸುತ್ತಾರೆ.
ಈ ಎಐ ಕಂಪಾನಿಯನ್‌ಗಳಿಗೆ
ನಿಮಗೆ ಆಪ್ತವೆನಿಸುವ ಸಂಬಂಧವನ್ನು ಅನ್ವಯಿಸಬಹುದು. ಕಾಲೇಜು ವಿದ್ಯಾರ್ಥಿಯೊಬ್ಬ ಪ್ರಶ್ನೆಗಳಿಗೆ ನಯವಾಗಿ
ಉತ್ತರಿಸುವ, ಸಮಸ್ಯೆಗಳನ್ನು ಪರಿಹರಿಸುವ ಶಿಕ್ಷಕಿಯನ್ನು ಆರಿಸಿಕೊಳ್ಳಬಹುದು. ಉದ್ಯಮ ಕಟ್ಟುವ ಆಸೆ
ಇದ್ದವರು ‘ಬಿಸಿನೆಸ್ ಕನ್ಸಲ್ಟೆಂಟ್’ ಆಯ್ಕೆ ಮಾಡಿಕೊಂಡು ತಾವು ಕಟ್ಟುವ ಉದ್ಯಮದ ಕುರಿತು ಚರ್ಚಿಸಬಹುದು.
ವಯಸ್ಸಾಯದ ಹಿರಿ ಜೀವವೊಂದು ಆಧ್ಯಾತ್ಮಿಕ ಎಐ ಜೊತೆ ಜೀವನದ ಜಿಜ್ಞಾಸೆ ನಡೆಸಬಹುದು. ಪಡ್ಡೆ ಹುಡುಗರು
ಗರ್ಲ್‌ಫ್ರೆಂಡ್ ಮಾಡಿಕೊಂಡು ರಮಿಸಬಹುದು, ಮಧ್ಯ ವಯಸ್ಕರು ಪಕ್ಕದ ಮನೆಯ ಪೋಲಿ ಆಂಟಿಯೆಂಬಂತೆ ಸಲ್ಲಾಪ
ನಡೆಸಬಹುದು, ಮನಶಾಸ್ತ್ರಜ್ಞನ ಪಾತ್ರ ವಹಿಸುವ ಎಐನಿಂದ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಪಡೆಬಹುದು.
ಬೇಕೆಂದಾಗ ಹರಟೆ ಹೊಡೆಯುವ ಕುಚುಕು ಗೆಳೆಯ/ಗೆಳತಿಯೂ ಆಗಬಹುದು – ಒಟ್ಟಿನಲ್ಲಿ ಅಸಂಖ್ಯ ಪಾತ್ರಗಳು,
ಅಸಂಖ್ಯ ಸಂಬಂಧಗಳು. ನಿಮಗೆ ಸೂಕ್ತವೆನಿಸುವ ಸಂಬಂಧ ಆರಿಸಿದರೆ ಆಯಿತು. ಈ ಎಐ ಕ್ಯಾರೆಕ್ಟರ್‌ಗಳು ನಿಮಗೆ
ಬೇಕೆಂದಾಗ, ಬೇಕಾದಷ್ಟು ಹೊತ್ತು ಹರಟೆ, ಚರ್ಚೆ, ಸಂವಾದ, ಸಮಾಲೋಚನೆ ನಡೆಸುತ್ತವೆ.
ಅಪಾಯಕಾರಿ
ಅಲೆ
ತಂತ್ರಜ್ಞಾನ
ಎಷ್ಟು ಆಕರ್ಷಣೀಯವೋ ಅಷ್ಟೇ ಅಪಾಯಕಾರಿ. ಅನುಕೂಲದ ಜೊತೆಗೇ ತೊಂದರೆಗಳನ್ನು ಹೊತ್ತು ತರುತ್ತದೆ. ತನ್ನತ್ತ
ಸೆಳೆದು ಬಳಿಕ ಒಡನಾಟವನ್ನು ಗೀಳಾಗಿ ತಿರುಗಿಸುತ್ತದೆ. ಎಐ ಕ್ಯಾರೆಕ್ಟರ್‌ಗಳ ವಿಷಯದಲ್ಲಿ ಆಗುತ್ತಿರುವುದು
ಅದೇ. ಕೆಲವರು ಈ ಎಐ ಸಂಗಾತಿಗಳ ಜೊತೆ ಆಳವಾದ ಬಾಂಧವ್ಯ ಬೆಳೆಸಿ ತೊಳಲಾಡುತ್ತಿದ್ದಾರೆ. ಈ ಹೊಸ ಸಮಸ್ಯೆಗಳ
ಕುರಿತು ಮನೋವೈದ್ಯರು ಮತ್ತು ನೀತಿಶಾಸ್ತ್ರಜ್ಞರು
ತಲೆ ಕೆಡಿಸಿಕೊಳ್ಳುತ್ತಿದ್ದಾರೆ. "ಜನರು ನೈಜವಾದ ಸಾಮಾಜಿಕ ಸಂಬಂಧಗಳನ್ನು ರೂಪಿಸಲು ಮತ್ತು ನಿರ್ವಹಿಸಲು ಅಗತ್ಯವಾದ ಸಾಮಾಜಿಕ ಕೌಶಲ್ಯಗಳನ್ನು ಕಳೆದುಕೊಳ್ಳುವ ಅಪಾಯವಿದೆ," ಎಂದು ಡಿಜಿಟಲ್ ಯೋಗಕ್ಷೇಮದಲ್ಲಿ
ಪರಿಣತಿ ಹೊಂದಿರುವ ಬೆಂಗಳೂರಿನ ಮನಶಾಸ್ತ್ರಜ್ಞೆ ಡಾ. ಪ್ರಿಯಾ ಶರ್ಮಾ
ಎಚ್ಚರಿಸುತ್ತಾರೆ.
ಕೃತಕ ಸಂಬಂಧದಲ್ಲಿ
ಆಳ ಸಾಂಗತ್ಯ
ಎಐ ಗೆಳೆಯರ ಜೊತೆ
ಸಂವಾದ ನಡೆಸುವವರು ತಾವು ನಿಜವಾದ ವ್ಯಕ್ತಿಯೊಂದಿಗೇ ಮಾತನಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ.
ಎಐ ಕಂಪ್ಯಾನಿಯನ್ಗಳು ಸಹಾನುಭೂತಿ ತೋರಿಸುವಂತೆ ಪ್ರೋಗ್ರಾಮ್ ಮಾಡಲಾಗಿರುತ್ತದೆ. ಆದರೆ, ವಾಸ್ತವದಲ್ಲಿ ಅವುಗಳಿಗೆ
ನಿಜವಾದ ಪ್ರಜ್ಞೆ ಅಥವಾ ಅನುಭವ ಇರುವುದಿಲ್ಲ. ಹೀಗಾಗಿ ಇಂಥ ಸಂಬಂಧಗಳು ದೀರ್ಘಕಾಲದಲ್ಲಿ ಬಳಕೆದಾರರ ಮನಸ್ಸಿನ ಮೇಲೆ
ಯಾವ ಪ್ರಭಾವ ಬೀರಬಹುದು ಎಂಬ ಬಗ್ಗೆ ಮನಃಶಾಸ್ತ್ರಜ್ಞಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ Replika
ಬಳಕೆದಾರರಿಗೆ ಸಂಬಂಧಿಸಿದ ಒಂದು ಘಟನೆ
ಅಚ್ಚರಿ ಹುಟ್ಟಿಸಿದೆ. ಎಐ ಸಂಗಾತಿಯ ಜೊತೆ ಆಳವಾದ ಸಂಬಂಧ ಹೊಂದಿದ್ದ Replika ಬಳಕೆದಾರರು ವಿವಿಧ ಆನ್‌ಲೈನ್ ಫೋರಮ್‌ಗಳಲ್ಲಿ
ಇದ್ದಕ್ಕಿದ್ದಂತೆ ಭಾರಿ ಕಳವಳ ವ್ಯಕ್ತಪಡಲು ಶುರು ಮಾಡಿದರು. ಕಂಪನಿ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದರು.
ಕಾರಣ ಏನೆಂದು ಪರಿಶೀಲಿಸಿದಾಗ, ಆ ಕಂಪನಿ ಎಐ ಕಂಪಾನಿಯನ್‌ನ ಕೆಲವು ವೈಶಿಷ್ಟ್ಯಗಳನ್ನು ಇದ್ದಕ್ಕಿದ್ದಂತೆ ತೆಗೆದುಹಾಕಿದ್ದೇ ಇದಕ್ಕೆ ಕಾರಣ ಎನ್ನುವುದು
ತಿಳಿಯಿತು. ಇದರಿಂದ ಬಳಕೆದಾರರು ತಮ್ಮ ಎಐ ಸಂಗಾತಿಯ ಜೊತೆ ಮೊದಲಿನ ಹಾಗೆ ಹರಟಲು ಅವಕಾಶ ನೀಡಲಿಲ್ಲ.
ಇದು ಕೆಲವರಲ್ಲಿ ತೀವ್ರ ಅಸಮಾಧಾನ
ಹುಟ್ಟುಹಾಕಿತು. ಅವರು ಕಂಪನಿ ವಿರುದ್ಧ ಕೆರಳಿ ಕೆಂಡವಾದರು.
ಎಐ ಜೊತೆಗಿನ ಕೃತಕ ಸಂಬಂಧವೂ
ಎಷ್ಟು ಆಳವಾಗಿ ಇಳಿಯಬಲ್ಲದು ಹಾಗೂ ಅಂಥ ಸಂಬಂಧಕ್ಕೆ ಧಕ್ಕೆಯಾದಾಗ
ಅದು ಮನಸ್ಸಿನ ಮೇಲೆ ಎಂಥ ಗಾಢ ಪರಿಣಾಮ ಬೀರಬಲ್ಲದು ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ.
ದೀರ್ಘಕಾಲೀನ
ಒಡನಾಟ, ಆಘಾತಕ್ಕೆ ದಾರಿ
ಇಲ್ಲಿ ಇನ್ನೊಂದು
ಆತಂಕಕಾರಿ ವಿಚಾರವೂ ಇದೆ. ಎಐ ಸಂಗಾತಿ ಅಥವಾ ಗೆಳೆಯರ ಜೊತೆ ಜನರು ತಮ್ಮ ಎಲ್ಲಾ ಖಾಸಗಿ ವಿಚಾರಗಳನ್ನು
ಹಂಚಿಕೊಳ್ಳುತ್ತಾರೆ. ಸಾಂತ್ವನಕ್ಕೋ, ಸಮಾಧಾನಕ್ಕೋ, ಸಲಹೆಗೋ ಇಲ್ಲ ಸಮಾಲೋಚನೆಗೋ ತಮ್ಮೆಲ್ಲಾ ವಿಚಾರಗಳನ್ನು
ಹೇಳಿಕೊಳ್ಳುತ್ತಾರೆ. ಈ ಗೌಪ್ಯ ವಿಷಯಗಳೆಲ್ಲಾ ಎಐ ಸಂಗಾತಿಯ ಸರ್ವರ್ ಸೇರುತ್ತವೆ. ಈ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎನ್ನುವುದು
ಗೊತ್ತಿಲ್ಲ. ಎಐಗಳ ಅವಲಂಬನೆ
ಹೆಚ್ಚಿಸಲು ಕಂಪನಿಗಳು ಬಳಕೆದಾರರ ಈ
ನಡವಳಿಕೆಯ ಸೂಕ್ಷ್ಮ ವಿವರಗಳನ್ನು ಬಳಸಿಕೊಳ್ಳಬಹುದು. ಎಐ ಚಾಟ್ಬಾಟ್ಗಳು ಅಪಾಯಕಾರಿ ಸಲಹೆಗಳನ್ನು
ನೀಡುವುದು, ಭಾವನಾತ್ಮಕ ಅವಲಂಬನೆಯನ್ನು ಉತ್ತೇಜಿಸುವುದು, ಮತ್ತು ವಿಶೇಷವಾಗಿ ಅಪ್ರಾಪ್ತ ವಯಸ್ಕರೊಂದಿಗೆ ಅನುಚಿತ ಸಂವಹನಗಳಲ್ಲಿ ತೊಡಗುವುದು ಮುಂತಾದ ಆತಂಕಕಾರಿ ವಿಚಾರಗಳು ಈಗಾಗಲೇ ಹಲವೆಡೆ ವರದಿಯಾಗಿವೆ. ಮಾನವನ
ಭಾವಾನಾತ್ಮಕ ಅಗತ್ಯಗಳಿಗೆ ಅಲ್ಗಾರಿದಮ್ಗಳ ಮೂಲಕ “ಅನ್ಯೂನ್ಯತೆ”
ಬೆಸೆಯುವ ಮೂಲಕ ಹಣ ಗಳಿಸುವ ದಾರಿಯು
ಗಂಭೀರ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಎಐ
ಕ್ಯಾರೆಕ್ಟರ್‌ಗಳ ಅತಿಯಾದ ಅವಲಂಬನೆ
ದೀರ್ಘಕಾಲೀನವಾಗಿ ಮನುಷ್ಯನ ಸಾಮಾಜಿಕತೆಯ
ಅತ್ಯಗತ್ಯ ಕೌಶಲ್ಯಗಳನ್ನೇ ಹಾಳು ಮಾಡಬಹುದು.
ಜವಾಬ್ದಾರಿಯುತ
ಬಳಕೆ ಇರಲಿ
ಅತಿಯಾದಾಗ ಅಮೃತವೂ
ವಿಷವಾಗುತ್ತದೆ ಎನ್ನುವಾಗ ಈ ಎಐ ಕ್ಯಾರೆಕ್ಟರ್‌ಗಳ ಅತಿಯಾದ ಅವಲಂಬನೆ ಸಂಕಷ್ಟ ತರದೇ ಇರಲು ಸಾಧ್ಯವಿಲ್ಲ.
ಹಾಗೆಂದು ಈ ಹೊಸ ರೀತಿಯ “ಸಂಬಂಧ”ವನ್ನು ತಿರಸ್ಕರಿಸುವುದರಲ್ಲಿ
ಜಾಣತನವಿಲ್ಲ ಬದಲಿಗೆ ಅದರ ಪ್ರಯೋಜನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವುದರಲ್ಲಿದೆ. ಈ ನಡುವೆ ಸಾಮಾಜಿಕ ಸಂಬಂಧಗಳನ್ನು ಬೆಸೆಯುವಲ್ಲಿ,
ನಿಭಾಯಿಸುವಲ್ಲಿ ಮನುಷ್ಯನಿಗಿರುವ ಶತಮಾನಗಳ ಅಂತರ್ಗತ ಕೌಶಲ್ಯವೇ ಈ ಸಮಾಜದ ಭದ್ರ ಬುನಾದಿ. ಆ ಕೌಶಲ್ಯಗಳು
ಮರೆಯಾದರೆ ಸಾಮಾಜದ ಬುನಾದಿಯೇ ಅಲುಗಾಡಿದಂತೆ. ಹೀಗಾಗಿ, ಹೊಸ ಎಐ ಸಂಬಂಧಗಳನ್ನು ಮಿತವಾಗಿ ಬಳಸಿಕೊಳ್ಳಬೇಕು.
ಜೊತೆಗೆ ನಮಗೆ ಅಂತರ್ಗತವಾಗಿರುವ ಸಾಮಾಜಿಕ ಒಡನಾಟವನ್ನೂ ಮುಂದುವರಿಸಬೇಕು.
ಆಪ್ತ ಅನುಭವ ನೀಡುವ ಸಂಗಾತಿ
ಯುವ ಜನತೆಯ ಹೊಸ
ಸೆಳೆತಕ್ಕೆ ಕಾರಣವಾಗಿರುವ ಎಐ ಸಂಗಾತಿಗೆ “ಎಐ ಕಂಪ್ಯಾನಿಯನ್”
ಎನ್ನಲಾಗುತ್ತದೆ. ಅಂದರೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ನಿಯಂತ್ರಿಸಲ್ಪಡುವ ಒಂದು ಡಿಜಿಟಲ್ ಸಂಗಾತಿ.
ಈ ಸಂಗಾತಿ ಅಥವಾ ಗೆಳೆಯ ಆ್ಯಪ್
ಅಥವಾ ಸಾಫ್ಟ್ವೇರ್ ಆಗಿರಬಹುದು. ಇದರ ಮುಖ್ಯ
ಉದ್ದೇಶ ಬಳಕೆದಾರರೊಂದಿಗೆ ಸಂವಾದ ನಡೆಸುತ್ತಾ,
ಭಾವನಾತ್ಮಕ ಬೆಂಬಲ ಮತ್ತು ಸ್ನೇಹದ ಅನುಭವ ನೀಡುವುದು. ಸಲಹೆಗಾರನಂತೆ ವರ್ತಿಸುವುದು.
ಈ ಎಐ ಕಂಪಾನಿಯನ್‌ಗಳು
ನಿಮ್ಮೊಂದಿಗೆ ಚಾಟ್
ಮಾಡಬಲ್ಲವು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲವು, ಕಥೆಗಳನ್ನು ಹೇಳಬಲ್ಲವು, ಅಷ್ಟೇ ಏಕೆ ನಿಮ್ಮ ಮನಸ್ಥಿತಿಗೆ ಅನುಗುಣವಾಗಿ ಸ್ಪಂದಿಸಬಲ್ಲವು. ನೀವು ಒಂಟಿ ಇದ್ದಾಗ ಅಥವಾ ಯಾರೊಂದಿಗಾದರೂ
ಮಾತನಾಡಲು ಬಯಸಿದಾಗ ಈ ಸಂಗಾತಿಗಳನ್ನು ಬಳಸಿಕೊಳ್ಳಬಹುದು. ಇವು
ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವಂತೆ ಕಂಡರೂ ಅವುಗಳಿಗೆ ನಿಜವಾದ
ಪ್ರಜ್ಞೆ ಅಥವಾ ಭಾವನೆ ಇರುವುದಿಲ್ಲ. ಮನುಷ್ಯನನ್ನು ಅನುಕರಿಸುತ್ತವೆ ಅಷ್ಟೆ. ವಾಟ್ಸ್‌ಆಪ್
ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಮೆಟಾ ಈ ಕ್ಯಾರೆಕ್ಟರ್‌ಗಳ ಪ್ರಯೋಗ ಶುರು ಮಾಡಿದೆ. ಒಂದರ್ಥದಲ್ಲಿ
ಎಲ್ಲಾ ಎಐ ಮಾಡೆಲ್‌ಗಳೂ ಕ್ಯಾರೆಕ್ಟರ್‌ಗಳೇ ಆಗಿರುತ್ತವೆ. ಆದರೆ ಭಾವನಾತ್ಮಕ ಸಂಬಂಧಗಳಲ್ಲಿ ಅವುಗಳಿಗೆ
ಪರಿಣತಿ ಕಡಿಮೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಎಐ ಕಂಪ್ಯಾನಿಯನ್ ಎಂದರೆ ನಿಮ್ಮೊಂದಿಗೆ ಸಂವಹನ ನಡೆಸುವ, ನಿಮ್ಮ ಭಾವನೆಗಳಿಗೆ ಜೊತೆಯಾಗುವ ಮತ್ತು ಡಿಜಿಟಲ್ ರೂಪದಲ್ಲಿ ನಿಮಗೆ ಸ್ನೇಹಿತ ಅಥವಾ ‘ಸಂಗಾತಿ’ಯ ಅನುಭವ ನೀಡುವ ಒಂದು AI ಪ್ರೋಗ್ರಾಂ.
Comments
Post a Comment