'ಪರಮ' 'ಗುರು'ವೇ ನಮಃ
* ರಮೇಶ್ ನಿಂಬೆಮರ್ದಳ್ಳಿ
ಗುರು ಎಂದರೆ, ಶಿಕ್ಷಕ ಮಾತ್ರವಲ್ಲ. ಬದುಕಿನ ವಿವಿಧ ಘಟ್ಟಗಳಲ್ಲಿ ಬದುಕುವುದನ್ನು ಕಲಿಸುವ ಎಲ್ಲರೂ ಗುರುಗಳೇ. ಈ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವರು ತಾಯಿ ಮತ್ತು ಶಿಕ್ಷಕ. ನಮ್ಮ ಅಕಡೆಮಿಕ್ ಜೀವನದಲ್ಲಿ ಓದುವ, ಬರೆಯುವ ಮತ್ತು ಜಗತ್ತನ್ನು ಅಕ್ಷರಗಳ ಮೂಲಕ ಅರಗಿಸಿಕೊಳ್ಳುವ ಕಲೆಯನ್ನು ಕಲಿಸುವುದು ಶಿಕ್ಷಕನಾದರೆ, ತಾಯಿ ಬದುಕುವ ಕಲೆಯನ್ನೇ ಕಲಿಸುತ್ತಾಳೆ. ನಮ್ಮ 'ಬದುಕು' ಆರಂಭವಾಗುವುದೇ ತಾಯಿಯ ತೋಳಲ್ಲಿ. ಅಲ್ಲಿಂದ ಮುಂದೆ ನಮ್ಮ ಬದುಕು ಎನ್ನುವ ಅಮೂರ್ತ ಸಂಗತಿಯೊಂದು ಆದಷ್ಟು ಮೂರ್ತ ರೂಪ ಪಡೆದುಕೊಳ್ಳುವತ್ತ ಸಾಗಲು ಅಣಿಗೊಳ್ಳುತ್ತದೆ. ಅಕಡೆಮಿಕ್ ಶಿಕ್ಷಣ, ಉದ್ಯೋಗ, ಸಾಧನೆ ಇನ್ನೊಂದು ಮತ್ತೊಂದು ಎಲ್ಲವೂ ಬದುಕನ್ನು ಕಲಿಯುವ, ಅದಕ್ಕೆ ನಮ್ಮದೇ ರೀತಿಯಲ್ಲಿ ಮೂರ್ತ ರೂಪ ಕೊಡುವ ಪ್ರಕ್ರಿಯೆಗಳೇ ಅಲ್ಲವೇ?. ಇದೆಲ್ಲಕ್ಕೂ ಓಂಕಾರ ರೂಪಿಯಾಗಿ ನಿಲ್ಲುವುದು ತಾಯಿ ನಮ್ಮ ಬಾಲ್ಯದಲ್ಲಿ ನಮ್ಮ ಸುತ್ತಮುತ್ತಲ ಸಮಾಜವನ್ನು, ಸಂಬಂಧಗಳನ್ನು, ಅದರ ಸೂಕ್ಷ್ಮಗಳನ್ನು ಹೇಳಿಕೊಟ್ಟ ಶಿಕ್ಷಣವೇ. ಹೀಗಾಗಿ ನನಗೆ ತಾಯಿ ಮೊದಲ ಗುರು ಎನ್ನುವುದಕ್ಕಿಂತ, ತಾಯಿಯೇ ಜಗತ್ತಿನ ಶ್ರೇಷ್ಠ ಗುರು ಎಂದು ಭಾವಿಸುವುದರಲ್ಲಿ ಹೆಚ್ಚು ತೃಪ್ತಿಯಿದೆ.ಇತ್ತೀಚಿನ ದಿನಗಳಲ್ಲಿ 'ಗುರು'ವಿನ ಕಲ್ಪನೆ ಬದಲಾಗಿದೆ. ವಿದ್ಯಾರ್ಥಿ-ಶಿಕ್ಷಕ ಸ್ನೇಹಿತರಂತಿರಬೇಕು ಎನ್ನುವ ಕಲ್ಪನೆಗೆ ಬಹುತೇಕರ ಸಹಮತವಿದೆ. ಆದರೆ ಈ ಕಲ್ಪನೆಗೆ ನನ್ನ ವಿರೋಧವಿಲ್ಲದಿದ್ದರೂ 'ಗುರುವಿನ ಗುಲಾಮನಾಗುವಿಕೆ'ಯಲ್ಲಿ ನನಗೆ ಹೆಚ್ಚಿನ ನಂಬಿಕೆಯಿದೆ. ಮತ್ತೆ, ಅದುವೇ ಕಲಿಕೆಯ ಶ್ರೇಷ್ಠ ಮಾದರಿ ಎನಿಸುತ್ತಿದೆ. ಗುಲಾಮನಾಗುವುದೆಂದರೆ ಅಡಿಯಾಳು ತನವಲ್ಲ; ಬದಲು ಗುರುವಿನ ಬೌದ್ಧಿಕ ಪಾರಮ್ಯವನ್ನು, ನಮಗಿಂತ ಹೆಚ್ಚಿರುವ ಆತನ ಅನುಭವವನ್ನು ಒಪ್ಪಿಕೊಳ್ಳುವುದು ಎಂದಷ್ಟೇ ಅರ್ಥ. ನಮ್ಮ ಹಿಂದಿನ ಗುರುಕುಲ ಪರಂಪರೆಯಲ್ಲಿ ಈ ಮಾದರಿಯನ್ನು ಕಾಣಬಹುದು.
'ಗುರುವಿಗೆ ಗುಲಾಮನಾಗುವುದು' ಕಲಿಕೆಯ ಉತ್ತಮ ಮಾದರಿ ಎನ್ನುವುದಕ್ಕೆ ಕಾರಣಗಳಿವೆ. ಕಲಿಕೆಯ ಕ್ರಮದಲ್ಲಿ ಗುರುವು ಮೇಲ್‌ಸ್ತರದಲ್ಲೂ ಶಿಷ್ಯ ಅಥವಾ ವಿದ್ಯಾರ್ಥಿ ಕೆಳಸ್ತರದಲ್ಲೂ ಇರುತ್ತಾನೆ. ಯಾಕೆಂದರೆ ಕಲಿಕೆ ಎನ್ನುವುದು ಬಹುತೇಕ ಪಡೆದುಕೊಳ್ಳುವ ಪ್ರಕ್ರಿಯೆ. (ಇಲ್ಲಿ ಶಿಷ್ಯ ಗುರುವಿಗೆ ಒಮ್ಮೊಮ್ಮೆ ಗುರುವಾಗಬಲ್ಲನಾದರೂ, ಅದೂ ಕೂಡ ಪಡೆಯುವಿಕೆಯಿಂದ ಬಂದ ಪ್ರತಿಫಲವೇ) ವಿಶ್ವದ ಎಲ್ಲ ಮಿಲಿಟರಿ ತರಬೇತಿಗಳಲ್ಲಿ ಮೊದಲು ಹೇಳಿಕೊಡುವ ಪಾಠ ಎಂದರೆ, ತರಬೇತಿಯಲ್ಲಿನ ಯೋಧರು ಮೊದಲು ತಮ್ಮ ಮೇಲಧಿಕಾರಿಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು. ಎಂದರೆ ಅನುಮಾನಕ್ಕೆಡೆಯಿಲ್ಲದಂತೆ ಅವರ ಆಜ್ಞೆಗಳನ್ನು ಪಾಲಿಸುವುದು. ಇನ್ನು ಕರಾಟೆ ಸೇರಿದಂತೆ ಸಮರ ಕಲೆಗಳಲ್ಲೂ ಗುರು ಪ್ರಶ್ನಾತೀತ. ಸಂಗೀತ, ನಾಟ್ಯ ತರಬೇತಿಗಳಲ್ಲಿ ಗುರುವನ್ನು ದೇವರೆಂದೇ ಕಾಣಲಾಗುತ್ತದೆ. ಆದ್ಯಾತ್ಮದ ಹಾದಿಯಲ್ಲಿ ಗುರು ಎಂದರೆ ಬದುಕಿನ ಅಂಧಕಾರ ತೊಳೆಯುವ ಬೆಳಕು. ಮನುಷ್ಯನೊಬ್ಬ ತಲುಪಬಹುದಾದ 'ಅತ್ಯುನ್ನತ ಸ್ಥಿತಿ'ಗೆ ಕರೆದೊಯ್ಯುವ ನಾವಿಕ. ಇನ್ನು ಶ್ರೇಷ್ಠ ನಾಯಕತ್ವ ಮತ್ತು ಪಾಲಕರ(followers) ನಡುವಿನ ಸಂಬಂಧವೂ ಇದೇ ತೆರನಾಗಿರುತ್ತದೆ. ಪಾಲಕರು ಒಬ್ಬನ ನಾಯಕತ್ವವನ್ನು ಒಪ್ಪಿಕೊಳ್ಳದ ಹೊರತು ಅಲ್ಲೊಂದು 'ಪಡೆ' ರಚನೆಯಾಗಲು ಸಾಧ್ಯವೇ ಇಲ್ಲ. ಈ ಎಲ್ಲ ಉದಾಹರಣೆಗಳಲ್ಲೂ ನಮಗೆ ಕಾಣುವುದು 'ಗುರು'ವಿನ ಪಾರಮ್ಯ, ಶಿಷ್ಯನ ದೈನ್ಯ.
ಹೀಗೆ 'ಗುರು'ವನ್ನು ನಮಗಿಂತ ಹೆಚ್ಚು ತಿಳಿದವ, ನಮಗಿಂತ ಹೆಚ್ಚಿನ ಬದುಕಿನ ಅನುಭವ ಪಡೆದವ ಎಂದು ಭಾವಿಸಿದರೆ ಅದು ಕಲಿಕೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹಾಗೆಂದು ಈ ರೀತಿಯ ಕಲಿಕಾ ಪ್ರಕ್ರಿಯೆ ಏಕಮುಖಿಯೆಂದು ಭಾವಿಸುವ ಅಗತ್ಯವಿಲ್ಲ. ಈ ಮಾದರಿಯಲ್ಲೂ ಕಲಿಕೆ ದ್ವಿಮುಖಿಯಾಗಲು ಸಾಧ್ಯ.
ಒಟ್ಟಾರೆ ಗುರು-ಶಿಷ್ಯ ಸಂಬಂಧ ಮತ್ತು ಕಲಿಕೆ ಕುರಿತು ನನ್ನ ಅಭಿಪ್ರಾಯ ಇದು: ಗುರು ಶಿಷ್ಯನಿಗಿಂತ ಶ್ರೇಷ್ಟನೇನಲ್ಲ. ಆತ ಪ್ರಶ್ನಾತೀತನೇನೂ ಅಲ್ಲ; ಗುರು-ಶಿಷ್ಯರ ನಡುವೆ ಶ್ರೇಣೀಕೃತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಇದ್ದರೆ ಕಲಿಕೆ ಸುಗಮ-ಎನ್ನುವ ಪ್ರಸ್ತುತ ಜನಪ್ರಿಯ ಕಲಿಕಾ ಮಾದರಿಗಿಂತ ಗುರುವಿನ ಪಾರಮ್ಯತೆಯನ್ನು ಒಪ್ಪಿಕೊಳ್ಳುವ ಮತ್ತು ಆತನಿಗೆ ವಿದೇಯನಾಗಿರುವ "ಗುರುಕುಲ" ಮಾದರಿ ಕಲಿಕೆಯ ಉತ್ತಮ ಮಾದರಿಯಾಗಬಲ್ಲುದು ಎನ್ನುವುದು ನನ್ನ ನಂಬಿಕೆ.
Comments
Post a Comment