ಉಗ್ರನಿಗೆ ಬೈದಿದ್ದಕ್ಕೆ ಮಗುವಿಗೆ ಸಿಕ್ಕಿದ್ದು ಚಾಕಲೇಟ್ ಮತ್ತು ಜೀವ

* ರಮೇಶ್‌ ನಿಂಬೆಮರ್ದಳ್ಳಿ


ಶಾಪಿಂಗ್ ಮಾಲ್‌ ಒಳಗೆ, ಉಗ್ರರ ಮೆಷಿನ್‌ ಗನ್ ಕೆಳಗೆ ಒತ್ತೆಯಾಳುಗಳೆಲ್ಲ ನಡುಗುತ್ತ ಕುಳಿತಿದ್ದರು. ತಾವು ಬದುಕಿ ಹೊರ ನಡೆಯುತ್ತೇವೆ ಎಂಬ ಯಾವ ಭರವಸೆಯೂ ಇಲ್ಲದೆ ವೈರಾಗ್ಯ ಹೊತ್ತು ಕ್ಷಣ ದೂಡುತ್ತಿದ್ದರು. ಉಗ್ರರ ಬಂದೂಕಿನ ಗುಂಡಿಗೆ ಎದೆಯೊಡ್ಡಲು ಅಂಜಿ ಅವರ ವಿರುದ್ಧ ಒಂದು ಮಾತು ತೆಗೆಯಲೂ ಅಳುಕುತ್ತಿದ್ದರು. ಆದರೆ ಬಾಲಕ ಮಾತ್ರ, ಉಗ್ರರ ಬಳಿ ಹೋಗಿ ಧೈರ್ಯದಿಂದ 'ನೀನು ಕೆಟ್ಟ ಮನುಷ್ಯ' ಎಂದಿದ್ದ.  ಅದಕ್ಕೆ ಅವನಿಗೆ ಸಿಕ್ಕ ಬಳುವಳಿ ಚಾಕಲೇಟ್‌ ಮತ್ತು ಜೀವ.

ನಾಲ್ಕು ವರ್ಷದ ಎಲ್ಲಿಯಟ್‌ ಪ್ರಯರ್‌ ಎಂಬಾತನೇ ಆ ಧೈರ್ಯಶಾಲಿ ಬಾಲಕ. ತನ್ನ ಅಮ್ಮ, ಅಕ್ಕನ ಜೊತೆ ಶಾಪಿಂಗ್ ಮಾಲ್‌ಗೆ ಬಂದಿದ್ದ ಅವನು ಉಗ್ರರ ದಾಳಿ ನಡೆದಾಗ ಅವರ ಒತ್ತೆಯಾಳಾಗಿದ್ದ. ಉಗ್ರರಲ್ಲೊಬ್ಬ 'ಶಾಪಿಂಗ್ ಮಾಲ್‌ನಲ್ಲಿ ಯಾರೇ ಮಕ್ಕಳಿದ್ದರೂ ಅವರು ಹೊರಗೆ ಹೋಗಬಹುದು' ಎಂದ. ಕೂಡಲೇ ಎಲ್ಲಿಯಟ್‌ ತಾಯಿ ಎದ್ದು ನಿಂತು ತನ್ನ ಮಗನಿದ್ದಾನೆ ಎಂದಳು. ತಕ್ಷಣವೇ ಉಗ್ರರ ಬಳಿ ಬಂದ ಪುಟ್ಟ ಬಾಲಕ ಎಲ್ಲಿಯಟ್‌ 'ನೀನು ಕೆಟ್ಟ ಮನುಷ್ಯ' ಎಂದನಲ್ಲದೆ, 'ದಯವಿಟ್ಟು ನಮ್ಮನ್ನು ಕ್ಷಮಿಸು, ನಾವು ರಾಕ್ಷಸರಲ್ಲ' ಎಂದು ಬೇಡಿಕೊಂಡ. ಮನ ಕರಗಿದ ಉಗ್ರ ಪುಟ್ಟ ಬಾಲಕನಿಗೆ ಚಾಕೊಲೇಟ್‌ ಕೊಟ್ಟು ಹೊರ ಕಳಿಸಿದ ಎಂದು 'ದಿ ಸನ್‌' ವರದಿ ಮಾಡಿದೆ.

'ದಿ ಸನ್‌' ವರದಿ ಮಾಡಿರುವಂತೆ, ಬಾಲಕ ಎಲ್ಲಿಯಟ್‌ ಅವರ ಅಮ್ಮ ಚಿತ್ರ ನಿರ್ಮಾಪಕಿ. ತಾನು ಹೊರ ಬರುವಾಗಿ ಜೊತೆಯಲ್ಲಿ ಇಬ್ಬರು ಬೇರೆ ಮಕ್ಕಳನ್ನೂ ಕರೆತಂದಿದ್ದರು. ಆ ಮಕ್ಕಳ ತಾಯಿಯನ್ನು ಉಗ್ರರು ಗುಂಡಿಕ್ಕಿ ಕೊಂದು ಶಾಪಿಂಗ್ ಟ್ರಾಲಿಯಲ್ಲಿಟ್ಟು ಮಾಲ್‌ನಿಂದ ಹೊರದಬ್ಬಿದ್ದರು.

ಉಗ್ರರಲ್ಲೊಬ್ಬ ಎಲ್ಲಿಯಟ್‌ ತಾಯಿಗೆ 'ನಾವು ಕೊಲ್ಲುವುದು ಕೇವಲ ಕೀನ್ಯನ್ನರು ಮತ್ತು ಅಮೆರಿಕನ್ನರನ್ನು ಮಾತ್ರ' ಎಂದಿದ್ದ. ಬಾಲಕನ ಧೈರ್ಯ ಆ ಇಡೀ ಕುಟುಂಬವನ್ನು ಸಾವಿನ ದವಡೆಯಿಂದ ಪಾರು ಮಾಡಿತ್ತು.

Comments

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ