ಕೃಷಿಯಲ್ಲಿ ಶುರುವಾಗಿದೆ ಕೃತಕ ಬುದ್ಧಿವಂತಿಕೆ ಕ್ರಾಂತಿ

ಮಳೆ, ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ನಿಂತಿರುವ ಭಾರತದ ಕೃಷಿಗೆ ಹಲವು ಅಡ್ಡಿ ಆತಂಕಗಳಿವೆ. ಭಾರತದ ಬಹುತೇಕ ಬೇಸಾಯ ಮಳೆಯ ಮೇಲೆ ನಿಂತಿದೆ. ಮಳೆ ಮುಗಿಲು ಸೇರಿದರೂ ಸಮಸ್ಯೆ; ಅತಿಯಾಗಿ ಸುರಿದರೂ ಅಪಾಯ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯೂ ಈ ಕ್ಷೇತ್ರವನ್ನು ಬಾಧಿಸುತ್ತಿದೆ. ದಶಕಗಳ ಕಾಲ ಭೂಮಿ ತಾಯಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ನುಂಗಿ ಬಂಜೆಯಾಗುತ್ತಿದ್ದಾಳೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಹೇಗೋ ಒಳ್ಳೆಯ ಬೆಳೆ ತೆಗೆದರೆ ಸರಿಯಾದ ಮಾರುಕಟ್ಟೆಯಂತೂ ಸಿಗುವುದಿಲ್ಲ, ಖರ್ಚಿನ ಮೇಲೆ ಒಂದಿಷ್ಟು ಲಾಭ ನೋಡುವಷ್ಟು ಬೆಲೆ ದೊರಕುವುದು ಅಪರೂಪವೇ ಸರಿ. ಇದೆಲ್ಲದರ ನಡುವೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಯಂತ್ರಾಧಾರಿತ ಆಧುನಿಕ ಬೇಸಾಯದ ಕ್ರಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಈಗ ನಾವು ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಸಂಚಲನವನ್ನು ಕಾಣುತ್ತಿದ್ದೇವೆ. ಆ ಸಂಚಲನ ಹಿಂದೆಂದೂ ನೋಡಿರದಂಥದ್ದು. ಇದು ಕೇವಲ ಆಧುನಿಕವಲ್ಲ, ಅತ್ಯಾಧುನಿಕ. ಈ ಅತ್ಯಾಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ನಾವೀಗ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಉತ್ತರ ಹೇಳಬಲ್ಲಂಥದ್ದು. ಅದುವೇ ಕೃಷಿ ಕ್ಷೇತ್ರದ ಕೃತಕ ಬುದ್ಧಿವಂತಿಕೆ. ಒಟ್ಟಾರೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಪಂಚದಲ್ಲಿ ಬಹುದೊಡ್ಡ ಸಂಚಲನ ಹುಟ್ಟು ಹಾಕಿರುವ ಕೃತಕ ಬುದ್ಧಿವಂತಿಕೆ ಎಂದರೆ ಆರ್ಟಿಫಿಷಿಯಲ್ ಇಂಟೆಲೆಜೆನ್ಸಿ ಈ...