2019ರಲ್ಲಿ ಬದುಕನ್ನು ಪ್ರಭಾವಿಸುವ ತಂತ್ರಜ್ಞಾನಗಳು ಯಾವು ಗೊತ್ತಾ?
ತಾಂತ್ರಿಕ ಆವಿಷ್ಕಾರಗಳು
ಪ್ರತಿದಿನ ಸಂಭವಿಸುತ್ತಲೇ ಇವೆ. ದಿನಕ್ಕೊಂದು, ಕ್ಷಣಕ್ಕೊಂದು ತಂತ್ರಜ್ಞಾನ ಬೆಳಕು ಕಾಣುತ್ತಲೇ ಇದೆ.
ಯಾವುದೇ ತಂತ್ರಜ್ಞಾನದ ಪರಿಣಾಮಗಳನ್ನು ಪಕ್ಕಕ್ಕಿಟ್ಟು ಮಾತನಾಡುವುದಾದರೆ, ಈ ಹೊತ್ತಿನ ಸಂದರ್ಭದಲ್ಲಿ
ತಂತ್ರಜ್ಞಾನ ಕ್ರಾಂತಿಯೇ ಸಂಭವಿಸುತ್ತಿದೆ. ಆದರೂ ಎಲ್ಲ ತಂತ್ರಜ್ಞಾನಗಳೂ ಜನರ ಬದುಕಿನಲ್ಲಿ ನಿಲ್ಲುವುದಿಲ್ಲ.
ಕೆಲವು ಹಾಗೆ ಬಂದು ಹೀಗೆ ಮರೆಯಾಗುತ್ತವೆ. ಮತ್ತೆ ಕೆಲವು ಒಂದಷ್ಟು ಕಾಲ ಚಾಲ್ತಿಯಲ್ಲಿದ್ದು, ಬಳಿಕ
ಮರೆಯಾಗುತ್ತವೆ. ಆದರೆ ಕೆಲವೇ ಕೆಲವು ತಂತ್ರಜ್ಞಾನಗಳು ಜನರ ಬದುಕಿನ ಮೇಲೆ ಅಗಾಧವಾದ ಪರಿಣಾಮವನ್ನು
ಬೀರುತ್ತವೆ. ಜೊತೆಗೆ ಸಮಾಜದಲ್ಲಿ ಭಾರಿ ಪರಿವರ್ತನೆಯನ್ನು ತರುತ್ತವೆ.
ಈ ವರ್ಷ ಅಂದರೆ
2018ರಲ್ಲಿ ಜಗತ್ತಿನಾದ್ಯಂತ ಹೆಚ್ಚು ಚಾಲ್ತಿಗೆ ಬಂದಿರುವ/ಬರುವ ಕೆಲವು ತಂತ್ರಜ್ಞಾನಗಳು ಹೀಗಿವೆ:
1.ಕೃತಕ ಬುದ್ದಿಮತ್ತೆ: ಕೃತಕ ಬುದ್ಧಿಮತ್ತೆ ಎನ್ನುವುದು
ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಪದ. ಇದನ್ನು ಸರಳವಾಗಿ ವಿವರಿಸುವುದಾದರೆ, ಯೋಚಿಸುವ ಇಲ್ಲವೇ
ವಿವೇಕವುಳ್ಳ ಪ್ರೋಗ್ರಾಂ. ಕೃತಕ ಬುದ್ಧಿವಂತಿಕೆ ಎನ್ನುವುದು ಒಂದು ಪ್ರೋಗ್ರಾಂ ಆಗಿದ್ದು, ಇದು ಹೊಸದಾಗಿ
ಕಲಿಯುತ್ತದೆ; ತನ್ನಲ್ಲಿರುವ ಸಮಸ್ಯೆಗಳನ್ನು ತಾನೇ ಸುಧಾರಿಸಿಕೊಳ್ಳುತ್ತದೆ; ಸಂದರ್ಭಾನುಸಾರ ವರ್ತಿಸುವುದನ್ನು
ಅಭ್ಯಾಸ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಒಬ್ಬ ಮನುಷ್ಯ ಕಲಿಯುವ, ತಪ್ಪುಗಳನ್ನು ತಿದ್ದಿಕೊಳ್ಳುವ
ಕ್ರಮದಲ್ಲೇ ಈ ಪ್ರೋಗ್ರಾಂ ಕೂಡ ಕಲಿಯುತ್ತದೆ ಮತ್ತು ಯೋಚಿಸುತ್ತದೆ. ಮೊದಲಿದ್ದ ಪ್ರೋಗ್ರಾಂಗಳಾದರೆ
ಅವು ಯಾವ ರೀತಿ ಕೋಡ್ ಬರೆದಿರುತ್ತಾರೋ ಅದೇ ರೀತಿಯಲ್ಲಿ ವತ್ತಿಸುತ್ತಿದ್ದವು. ಅಥವಾ ನಿಗದಿತ ಕೆಲಸವನ್ನಷ್ಟೇ
ಮಾಡುತ್ತಿದ್ದವು. ಆದರೆ ಈಗಿನ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಂ ವಹಿಸಿದ ಕೆಲಸವನ್ನಷ್ಟೇ
ಅಲ್ಲದೇ ಬೇರೆಯ ಕೆಲಸವನ್ನೂ ತಾನೇ ಸ್ವತಃ ಯೋಚಿಸಿ ಮಾಢಬಲ್ಲದು.
ಈ ಕೃತಕ ಬುದ್ಧಿಮತ್ತೆಯನ್ನು
ಹಲವು ಕ್ಷೇತ್ರಗಳಲ್ಲಿ ಅನ್ವಯಿಸಲಾಗುತ್ತಿದೆ. ಇದರ ವೇಗ ನೋಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ
ಇಡೀ ಬದುಕನ್ನು ಇದು ಆವರಿಸಿಕೊಳ್ಳುತ್ತದೇನೋ ಎನಿಸುತ್ತಿದೆ. ಕೃಷಿ, ವೈದ್ಯಕೀಯ, ಉದ್ಪಾದನೆ, ಆವಿಷ್ಕಾರ,
ದತ್ತಾಂಶ ಸಂಸ್ಕರಣೆ, ಸರಕಾರಿ ಸೇವೆಗಳು, ಆನ್‌ಲೈನ್ ಪೇಮೆಂಟ್, ಇಮೇಲ್, ಆಪ್, ವೆಬ್‌ಸೈಟ್,
ಡಿಸೈನ್, ಮೂವಿ ಪ್ರೊಡಕ್ಷನ್ ಮುಂತಾದ ಹತ್ತು ಹಲವು ಕಡೆ ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿದೆ.
ಹೊಸ ಹೊಸ ಬಳಕೆಯ ದಾರಿಗಳು ತೆರೆಯುತ್ತಲೇ ಇವೆ. ಮನುಷ್ಯನ ಸಮಕ್ಕೆ ಬೆಳೆಯುವ ಕಾಲ ಇನ್ನೂ ದೂರವಿರುವುದರಿಂದ
ಸದ್ಯಕ್ಕಂತೂ ಭಯವಿಲ್ಲ.
ಡಿಜಿಟಲ್ ಕೇಂದ್ರೀಕರಣ: ಇದು ಡಿಜಿಟಲ್ ಲೋಕದ ಹೊಸ ಪರಿಕಲ್ಪನೆ. ಅಂದರೆ
ನಮ್ಮ ಹತ್ತು ಹಲವು ಡಿಜಿಟಲ್ ಡಿವೈಸ್, ಸೇವೆಗಳನ್ನು ಒಂದೇ ಕಡೆಯಿಂದ ನಿಯಂತ್ರಿಸುವುದು. ಉದಾಹರಣೆ.
ಗೂಗಲ್ ಸ್ಮಾರ್ಟ್ ಸ್ಪೀಕರ್ಸ್. ಒಂದು ಮನೆಯಲ್ಲಿರುವ ಎಲ್ಲ ಡಿಜಿಟಲ್ ಡಿವೈಸ್‌ಗಳನ್ನು ಆ ಒಂದು
ಸ್ಪೀಕರ್ ಮೂಲಕ ನಿಯಂತ್ರಿಸಲಾಗುತ್ತಿದೆ. ಅದು ಹೆಸರಿಗಷ್ಟೇ ಸ್ಪೀಕರ್ ಆದರೆ. ಅದರೊಳಗೆ ಅಗಾಧ ತಂತ್ರಜ್ಞಾನವಿದೆ.
ವಾಯ್ಸ್ ಕಮಾಂಡ್‌ಗಳನ್ನು ಸ್ವೀಕರಿಸಿ ಕೆಲಸ ಮಾಡುವ ಗೂಗಲ್ ಅಸಿಸ್ಟೆಂಟ್ ಇದೆ. ಅದರ ಮೂಲಕ ಎಸಿ,
ಟಿವಿ, ರಿಫ್ರಿಜರೇಟರ್ ಮತ್ತಿತರೆ ಸ್ಮಾರ್ಟ್ ಡಿವೈಸ್‌ಗಳನ್ನು ನಿಯಂತ್ರಿಸಬಹುದು. ಜಿಯೋ ಕಂಪನಿ
ಹೊರತಂದಿರುವ ಗೀಗಾಫೈಬರ್ ಇದೇ ತೆರನಾದ ಡಿಜಿಟಲ್ ಸೆಂಟ್ರಲೈಷನ್ ತಂತ್ರಜ್ಞಾನವನ್ನು ಮನೆ ಮನೆಗೂ
ತರುತ್ತಿದೆ. ಒಂದು ಸೆಟ್‌ಟಾಪ್ ಬಾಕ್ಸ್ ಮೂಲಕ ಮನೆಯ ಎಲ್ಲ ಸ್ಮಾರ್ಟ್ ಡಿವೈಸ್‌ಗಳನ್ನು ನಿಯಂತ್ರಿಸಬಹುದು;
ಬದುಕನ್ನೂ ಕೂಡ.
5ಜಿ ತಂತ್ರಜ್ಞಾನ: 4ಜಿ ತಂತ್ರಜ್ಞಾನವ ಬಂದಾಗಿನಿಂದ ಇಂಟರ್ನೆಟ್
ಬಳಕೆ ಅಧಿಕವಾಗಿದೆ. ಆದರೆ, ಇದಕ್ಕಿಂತ 10 ಪಟ್ಟು ಹೆಚ್ಚು ವೇಗ ಹೊಂದಿರುವ 5ಜಿ ತಂತ್ರಜ್ಞಾನ
2019ರಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಇದು ಬಂದರೆ, ಇಂಟರ್ನೆಟ್ ಬಳಸುವ ರೀತಿಯೇ ಬದಲಾಗುತ್ತದೆ.
ಆನ್‌ಲೈನ್ ನ ಎಲ್ಲ ವ್ಯವಹಾರಗಳೂ ವೇಗ ಪಡೆದುಕೊಳ್ಳುತ್ತವೆ. ಎಲ್ಲ ಟಿವಿ, ಮೂವಿಗಳೂ ಆನ್‌ಲೈನ್‌ನಲ್ಲೇ
ಪ್ರಸಾರ ಕಾಣುತ್ತವೆ. ಆಗ ನಮ್ಮ ಬದುಕು ಇನ್ನಷ್ಟು ಇಂಟರ್ನೆಟ್‌ಗೆ ಅವಲಂಬಿಯಾಗುತ್ತದೆ.
ಇವಲ್ಲದೆ, ಸ್ಮಾರ್ಟ್ ಸ್ಪೀಕರ್‌ಗಳಂಥ
ಡಿವೈಸ್‌ಗಳು ಬಂದ ಬಳಿಕ ಖಾಸಗಿ ದತ್ತಾಂಶದ ಹೆಚ್ಚಳವಾಗುತ್ತದೆ. ಹಲವು ಕಂಪನಿಗಳು ಗ್ರಾಹಕರ ಈ ಖಾಸಗಿ
ವಿವರಕ್ಕೆ ಗಾಳ ಹಾಕುತ್ತವೆ. ಯಾಕೆಂದರೆ ಗ್ರಾಹಕರನ್ನು ಸೆಳೆಯಲು ಅವರಿಗೆ ಇದುವೇ ಗಾಣದ ಹುಳು. ಇನ್ನು
ಹಲವು ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳು ಮನುಷ್ಯರ ಕೆಲವು ಕೆಲಗಳನ್ನು ಕಿತ್ತುಕೊಳ್ಳುವುದು
ಗ್ಯಾರಂಟಿ. ಉದ್ಯೋಗ ಕ್ಷೇತ್ರದಲ್ಲಿ ಭಾರಿ ಪಲ್ಲಟವಾಗುತ್ತದೆ. ಎಲ್ಲ ಡಿವೈಸ್‌ಗಳೂ ನಿಜವಾದ ಅರ್ಥದಲ್ಲಿ
ಸ್ಮಾರ್ಟ್ ಆಗುತ್ತಿರುವುದರಿಂದ ನಮ್ಮ ಉಪಕರಣಗಳ ಜತೆಗೆ ನಾವು ಮಾತುಕತೆ ಅರಂಭಿಸುತ್ತೇವೆ. ನಿಜವಾಗಿಯೂ
ಇದು ಮಾತುಕತೆಯೇ. ಮನೆಯಲ್ಲಿ ಒಬ್ಬರೇ ಇದ್ದು ಬೋರ್ ಹೊಡೆಯೋರಿಗೆ ಮಾತನಾಡುವ ಪ್ರೋಗ್ರಾಂಗಳು ಬರುತ್ತವೆ.
ನಿಮ್ಮ ಎಲ್ಲ ಮಾತುಗಳ್ನು ತಾಳ್ಮೆಯಿಂದ ಕೇಳಿಸಿಕೊಂಡು ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸುವಷ್ಟು
ಸಂವಹನಶೀಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಯಂತ್ರಗಳೊಂದಿಗೆ ಸಂವಾದ ಈ ವರ್ಷದ ದೊಡ್ಡ ಕ್ರಾಂತಿಕಾರಿ
ತಂತ್ರಜ್ಞಾನವಾಗುತ್ತದೆ.
Comments
Post a Comment