ಫೇಸ್‌ಬುಕ್‌ಕ್ಕೊಂದು ಸಭ್ಯತೆಯ ಬೇಲಿ
ಫೇಸ್ಬುಕ್ ಎನ್ನುವುದು ಆಧುನಿಕ ಕಾಲದ ಒಂದು ಕ್ರಾಂತಿಕಾರಿ ವಿದ್ಯಮಾನ. ಫೇಸ್‌ಬುಕ್ ಒಂದು ಸಾಫ್ಟ್‌ವೇರ್ ಅಲ್ಲ;
ಒಂದು ವೆಬ್‌ಸೈಟ್ ಅಲ್ಲ. ಬದಲು, ಇದು ಭೌತಿಕ ಸಮಾಜಕ್ಕೆದುರಾಗಿ ಸೃಷ್ಟಿಯಾಗಿರುವ ಆನ್‌ಲೈನ್ ಸಮಾಜ. ಇದು ನಮ್ಮ ಸುತ್ತಮುತ್ತಲ ಇರುವ ಸಮಾಜದ ಬಿಂಬದಂತೆ ಕಂಡರೂ ಅದಕ್ಕಿಂತಲೂ ಬಿನ್ನ. ವೈರುಧ್ಯದ ಹಲವುಮನಸ್ಸುಗಳು ಸೇರಿ ಸಮಾಜವೆಂಬ ಸಮಷ್ಠಿ ಪ್ರಜ್ಞೆಯೊಂದು ರೂಪುಗೊಂಡಿರುವ ಹಾಗೆ ಇಲ್ಲಿಯೂ ಭಿನ್ನ ವಯೋಮಾನ, ಭಿನ್ನ ಧೋರಣೆಯ ವ್ಯಕ್ತಿಗಳಿದ್ದರೂ ಫೇಸ್‌ಬುಕ್ ಎಂಬ ಸಮಾಜಕ್ಕೆ ಸಾಮೂಹಿಕ ಗುಣವೊಂದು ಪ್ರಾಪ್ತವಾಗಿದೆ. ಹೀಗಾಗಿ ಇದು ವಿಶ್ವದಾದ್ಯಂತ ಅಧ್ಯನಕಾರರಿಗೆ ವಿಷಯಗಳ ಗಣಿ ಇದ್ದಂತೆ. ಸಮಾಜಶಾಸ್ತ್ರಜ್ಞರಿಗಂತೂ ಎಷ್ಟು ಮೊಗೆದರೂ ಉಕ್ಕುತ್ತಲೇ ಇರುವ ಚಿಲುಮೆ. ಫೇಸ್ಬುಕ್ ಮೇಲೆ, ಅದರಲ್ಲಿ ಸಕ್ರಿಯವಾಗಿರುವ ಯೂಸರ್, ಗ್ರೂಪ್, ಕಮ್ಯುನಿಟಿಗಳ ಬಗ್ಗೆ ನೂರಾರು ಅಧ್ಯಯನಗಳು ನಡೆದಿವೆ. ಮನಶಾಸ್ತ್ರಜ್ಞರಿಗೆ ಮನುಷ್ಯನ ಸಾಮಾಜಿಕ ವರ್ತನೆಗಳ ಅಧ್ಯನಕ್ಕೆ ಇದೊಂದುಅತ್ಯುತ್ತಮ ಸಾಧನವಾಗಿದೆ. ವಿವಿಧ ಕ್ಷೇತ್ರದ ಚಿಂತಕರು ಫೇಸ್ಬುಕ್, ಅದರಲ್ಲಿ ತೇಲುವ ಸಮಾಜ, ಮತ್ತದರ ಆಲೋಚನಾಕ್ರಮಗಳ ಬಗ್ಗೆ ಸಾಕಷ್ಟು ವಾಗ್ವಾದಗಳನ್ನು ನೆಡೆಸಿದ್ದಾರೆ. ತಂತ್ರಜ್ಞಾನದ ಅಪಾರ ಸಾಧ್ಯತೆಯನ್ನು ತೆರೆದಿಟ್ಟಿರುವ ಫೇಸ್ಬುಕ್ ಅದೇವೇಳೆ ತಂತ್ರಜ್ಞಾನದ ಮಿತಿ, ಅದರ ಆತ್ಯಂತಿಕ ಅಪಾಯಗಳನ್ನೂ ಬಯಲು ಮಾಡಿದೆ. ಇವೆಲ್ಲ ವಿಚಾರ, ವಾಗ್ವಾದ, ಅಧ್ಯಯನಗಳ ನಡುವೆ ಈಗ ಹೊಸದೊಂದು ವಿಚಾರ ಆನ್‌ಲೈನಲ್ಲಿ ರ್ಟೆಂಡಿಂಗ್ ಟಾಪಿಕ್ ಆಗಿದೆ. ಅದೇ ‘ಡಿಜಿಟಲ್ ಎಟಿಕೆಟ್’ .
ಫೇಸ್‌ಬುಕ್‌ನಲ್ಲಿ ಡಿಜಿಟಲ್ ಎಟಿಕೆಟ್ ಎಂಬ ವಿಷಯ ಚರ್ಚೆಗೆ ಬಂದ ಕಥೆಯೂ ಕುತೂಹಲಕರ. ಫೇಸ್‌ಬುಕ್ ಸಂಸ್ಥಾಪಕ ಮಾಕ್F ಝುಕರ್‌ಬರ್ಗ್ ಸಹೋದರಿ ರ್ಯಾಂಡಿ ಝುಕರ್‌ಬರ್ಗ್ ಮಾಡಿದ್ದ ಒಂದು 'ಪೋಸ್ಟ್' ಈ ಚರ್ಚೆ ಹುಟ್ಟುಹಾಕಿದೆ.
ಎಲ್ಲರೂ ಫೇಸ್‌ಬುಕ್ ನಲ್ಲಿ ಅಕೌಂಟ್ ಹೊಂದುವಂತೆ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮತ್ತು ಅವರ ಸಹೋದರಿ
ರ್ಯಾಂಡಿ ಝುಕರ್‌ಬರ್ಗ್ ಕೂಡ ಅಕೌಂಟ್ ಹೊಂದಿದ್ದಾರೆ. ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಶೇರ್
ಮಾಡಿಕೊಳ್ಳಲು ಬಯಸುವ ವಿಚಾರಗಳನ್ನು ಮತ್ತು ಪೋಟೋಗಳನ್ನು ತಮ್ಮ ಫೇಸ್‌ಬುಕ್ ವಾಲ್‌ಗೆ ಅಂಟಿಸುತ್ತಾರೆ.ಇತ್ತೀಚೆಗೆ ರ್ಯಾಂಡಿ ಝುಕರ್‌ಬರ್ಗ್, ವೈಯಕ್ತಿಕ ಫೋಟೋ ಒಂದನ್ನು ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ 'ಫ್ರೆಂಡ್ಸ್' ಗುಂಪಿನೊಂದಿಗೆ 'ಶೇರ್' ಮಾಡಿದರು. ಆದರೆ ಆ ಫೋಟೋ ಫ್ರೆಂಡ್ಸ್ ಮಾತ್ರವಲ್ಲದೆ 'ಪಬ್ಲಿಕ್' ಜೊತೆಯೂ ಶೇರ್ ಆಯಿತು. ಅದೇ ಫೋಟೋವನ್ನು ರ್ಯಾಂಡಿ
ಝುಕರ್ಬರ್ಗ್ ಪ್ರೆಂಡ್ಸ್ ಗ್ರೂಪ್‌ನಲ್ಲಿದ್ದ ಇತರರು ಫೇಸ್ಬುಕ್, ಟ್ವಿಟರ್ ಸೇರಿದಂತೆ ಇನ್ನೂ ಹಲವು ಸೋಶಿಯಲ್ ನೆಟ್‌ವರ್ಕ್‌ಗಳಲ್ಲಿ ತೇಲಿಬಿಟ್ಟರು. ನಂತರ
ಕ್ಷಣ ಮಾತ್ರದಲ್ಲಿ ಆ ಫೋಟೋ ಆನ್‌ಲೈನ್ ಜಗತ್ತಿನಾದ್ಯಂತ ಹರಿದಾಡಿತು. ಫೇಸ್‌ಬುಕ್ ಸೇರಿದಂತೆ
ವಿವಿಧ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಆ ಫೋಟೋಗೆ 'ಕಾಮೆಂಟ್'ಗಳ ಸುರಿಮಳೆಯೇ ಆಯಿತು. ಅದರಲ್ಲೂ ಫೇಸ್‌ಬುಕ್‌ನಲ್ಲಿ
ಹೊಸದಾಗಿ ಪರಿಚಯಿಸಲಾಗಿರುವ 'ಪೋಕ್' ಫೀಚರ್‌ನಿಂದಾಗಿ ಪ್ರತಿಕ್ರಿಯೆಗಳ ಹರಿವು ಜಾಸ್ತಿಯಾಯಿತು. ರ್ಯಾಂಡಿ ಶೇರ್ ಮಾಡಿದ್ದು, ತನ್ನ ಸಹೋದರ ಮಾರ್ಕ್ ಝುಕರ್‌ಬರ್ಗ್ ಕಿಚನ್‌ನಲ್ಲಿ ತರಲೆ ಮಾಡುತ್ತಿದ್ದ ಫೋಟೋ.
ಈ ಘಟನೆಯ ನಂತರ ಎರಡು ಮಹತ್ವದ ಚರ್ಚೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಒಬ್ಬರ ಖಾಸಗಿ
ಫೋಟೋವನ್ನು ಅವರ ಅನುಮತಿಯಿಲ್ಲದೆ ಇತರರೊಂದಿಗೆ ಶೇರ್ ಮಾಡುವುದು ಎಷ್ಟರ ಮಟ್ಟಿಗೆ ಸರಿ
ಎನ್ನುವುದನ್ನು ಕೇಂದ್ರವಾಗಿಟ್ಟುಕೊಂಡ ಆನ್‌ಲೈನ್ ಸಭ್ಯತೆ ಅಥವಾ ವರ್ತನೆ ಕುರಿತ 'ಡಿಜಿಟಲ್ ಎಟಿಕೆಟ್'ನ ಚರ್ಚೆ. ಮತ್ತೊಂದು, ಪ್ರೆಂಡ್ಸ್ ಗ್ರೂಪ್‌ಗೆ ಶೇರ್ ಆದ ಫೋಟೋ ಪಬ್ಲಿಕ್ ನೊಂದಿಗೆ ಶೇರ್ ಆಗಿದ್ದು ಹೇಗೆ ಎನ್ನುವ ಫೇಸ್‌ಬುಕ್ 'ಪ್ರೈವೆಸಿ ಸೆಟ್ಟಿಂಗ್ಸ್' ನಲ್ಲಿರುವ ಲೋಪಗಳ ಕುರಿತಾದ ಚರ್ಚೆ. 'ಇದು ಕೇವಲ ಪ್ರೈವೆಸಿ ಸೆಟ್ಟಿಂಗ್ಸ್ ಲೋಪವಲ್ಲ, ಮನುಷ್ಯನ ಸಭ್ಯತೆ ವಿಚಾರ' ಎಂದು ರ್ಯಾಂಡಿ ಝುಕರ್‌ಬರ್ಗ್ ಕಾಮೆಂಟ್ ಮಾಡಿರುವುದು
ಈ ವಾಗ್ವಾದಗಳನ್ನು ಇನ್ನಷ್ಟು ಬಿರುಸಾಗಿಸಿದೆ.
ಫೇಸ್‌ಬುಕ್‌ನಲ್ಲಿ ಯಾರು ಪ್ರೆಂಡ್ಸ್, ಯಾರು ಪಬ್ಲಿಕ್ ಎನ್ನುವುದನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಪುನರ್ ವ್ಯಾಖ್ಯಾನಿಸಬೇಕು.
ನಾವು ಪೋಸ್ಟ್ ಮಾಡಿದ ಯಾವುದೇ ಚಿತ್ರ, ವಿಚಾರ, ಲಿಂಕ್ ಅಥವಾ ಇನ್ನಾವುದೇ ಆಗಲಿ ಯಾವ ಗುಂಪಿಗೆ ಕಾಣಬೇಕು
ಮತ್ತು ಯಾವ ಗುಂಪಿಗೆ ಶೇರ್ ಮಾಡಲು ಸಾಧ್ಯವಾಗದಿರಬೇಕು ಎನ್ನುವುದೆಲ್ಲ ನಿರ್ಧಾರವಾಗಬೇಕು .
ಇದನ್ನನುಸರಿಸಿ ಪ್ರೆವೆಸಿ ಸೆಟ್ಟಿಂಗ್ಸ್ ಪುನರ್ ರೂಪುಗೊಳ್ಳಬೇಕು.
ಫೇಸ್‌ಬುಕ್‌ನಲ್ಲಿ ಕೆಲವು ಟ್ರೆಂಡ್‌ಗಳು ಸೃಷ್ಟಿಯಾಗುತ್ತಿದ್ದು ಅವನ್ನು ನಾವೆಲ್ಲರೂ ಅನಾಮತ್ತಾಗಿ ಬಳಸತ್ತಲೂ ಇದ್ದೇವೆ. ಯಾರೋ ಪೋಸ್ಟ್ ಮಾಡಿದ ಫೋಟೋ ನಮಗೆ ಚೆನ್ನಾಗಿದೆ ಎನಿಸಿದರೆ ಅವರ ಅನುಮತಿ ಕೇಳುವ ಗೋಜಿಗೆ
ಹೋಗದೆ ತಮ್ಮ ಗ್ರೂಪ್‌ನೊಂದಿಗೆ ಶೇರ್ ಮಾಡುವುದು. ಗೊತ್ತುಗುರಿಯಿಲ್ಲದ ಯಾರದೋ ಚರ್ಚೆಯಲ್ಲಿ ನಾವು
ಮೂಗು ತೂರಿಸಿ ಕಾಮೆಂಟ್ ಮಾಡುವುದು, ಮನಸ್ಸಿಗೆ ಹೇಗೆತೋಚುತ್ತೊ ಹಾಗೆ ಪ್ರತಿಕ್ರಿಯೆ ನೀಡುವುದು. ಸ್ನೇಹಿತರ ಹುಟ್ಟುಹಬ್ಬಕ್ಕೆ ಫೇಸ್‌ಬುಕ್‌ನಲ್ಲಿ ಶುಭಾಶಯ ತೇಲಿಬಿಟ್ಟು ‘ಜವಾಬ್ದಾರಿ’ಯಿಂದ ಮುಕ್ತರಾಗುವುದು. ಇತ್ತೀಚೆಗಂತೂ ಬರ್ತಡೇಗೆ
ಶುಭಾಶಯ ಹೇಳುವ ಬದಲು ಅವರನ್ನು ಕಿಚಾಯಿಸುವ ನೆಗೆಟಿವ್ ಕಾಮೆಂಟ್‌ಗಳೇ ಹೆಚ್ಚು. ಮದುವೆ ಫಿಕ್ಸ್
ಆದರೆ ‘ನನಗೆ ಎಂಗೇಜ್ಮೆಂಟ್’ ಅಂತ ಪೋಸ್ಟ್ ಹಾಕುವುದು, ಮದುವೆ ದಿನ ಹತ್ತಿರ ಬಂದಾಗ ‘ಕರೆಯೋಲೆ’ಯನ್ನು ಅಲ್ಲೇ ಹರಿಯಬಿಟ್ಟು ಇಡೀ ಫೇಸ್‌ಬುಕ್ ಬಳಗವನ್ನು ಮದುವೆಗೆ ಕರೆಯುವುದು. ಮದುವೆ ಮುಗಿದ ಮರುದಿನವೇ ಫಸ್ಟ್ ನೈಟ್‌ಗಿಂತ ಮುಖ್ಯವಾಗಿ ಫೇಸ್‌ಬುಕ್‌ನಲ್ಲೊಂದು ಜೋಡಿ ಫೋಟೋ ಹಾಕುವುದು. ಅದನ್ನೇ ಪ್ರೊಫೈಲ್ ಆಗಿ ಮಾರ್ಪಡಿಸುವುದು. ನಮ್ಮಲ್ಲಿ ಇನ್ನೂ ಕೆಲವರು ಹನಿಮೂನ್ ಟ್ರಿಪ್‌ನ ರಸ ನಿಮಿಷಗಳನ್ನೂ ಫೇಸ್‌ಬುಕ್‌ನಲ್ಲಿ ಅನಾವರಣ ಮಾಡಲು ಹಿಂಜರಿಯುವುದಿಲ್ಲ. ಮಗುವಾದ ಮರು ಕ್ಷಣವೇ ಅದರ ಮೊದಲ ಅಳು ಜಗತ್ತಿಗೆಲ್ಲ ಕೇಳಿಸಲೆಂಬಂತೆ ಹಾಲುಗಲ್ಲದ ಕಂದಮ್ಮನ ‘ಮುದ್ದು’ ಪೋಟೋ ಒಂದನ್ನು ಪೋಸ್ಟ್ ಮಾಡುವುದು. ‘ಮಗಾ, ಮಚ್ಚಾ, ಗುರೂ ಅಂತೂ ಸಾಧಿಸಿಬಿಟ್ಟೆ’ ‘ಕಂಗ್ರಾಟ್ಸ್, ಯು ಹ್ಯಾವ್ ಡನ್ ಇಟ್’ ಎಂಬಂತಹ ಗೆಳೆಯರ ಕಾಮೆಂಟ್ ನೋಡಿ ಎಲ್ಲರಿಗೂ
ಪುಳಕಗೊಳ್ಳುವುದು. ಫೋಟೋ ಮೇಲೊಂದು ಕವನ ಬರೆದು ಕಾಮೆಂಟ್‌ಗಾಗಿ ಕಾಯುವುದು. ದೇಶಭಕ್ತನ
ಪೋಟೋ ಹಾಕಿ ನಿಮಗೆ ದೇಶ ಪ್ರೇಮ ಇದ್ದರೆ ಇದನ್ನ ಲೈಕ್ ಮಾಡಿ ನೋಡೋಣ ಅಂತ ಅವರ ‘ದೇಶ ಪ್ರೇಮ’ವನ್ವೇ ಕೆಣಕುವುದು. ಇವೆಲ್ಲಫೇಸ್‌ಬುಕ್‌ನಲ್ಲಿ ಕಂಡುಬರುವ ಕೆಲವು ಟ್ರೆಂಡ್‌ಗಳು. ಇಲ್ಲಿನ ಹಲವು
ಟ್ರೆಂಡ್‌ಗಳು ಸಭ್ಯತೆಯ ಎಲ್ಲೆಯನ್ನು ಮೀರುವುದರಿಂದ ಡಿಜಿಟಲ್ ಎಟಿಕೆಟ್ ನ ಚರ್ಚೆ ಹೆಚ್ಚು ಪ್ರಸ್ತುತ.
ಡಿಜಿಟಲ್ ಎಟಿಕೆಟ್
ಡಿಜಿಟಲ್ ಸಿಟಿಜನ್‌ಷಿಪ್ ಎನ್ನುವುದು ಒಟ್ಟಾರೆ ತಂತ್ರಜ್ಞಾನದೊಂದಿಗೆ ಬಳಕದಾರನ ಒಡನಾಟ ಬಳಕೆ, ವರ್ತನೆ,ಸಂವಹನ ಕುರಿತಾದ ವ್ಯಾಪಕದವಾದ ಪರಿಕಲ್ಪನೆ ಇದರ ಒಂದು ಚಾಪ್ಟರ್ ಡಿಟಿಟಲ್ ಎಟಿಕೆಟ್. ಇದು
ತಂತ್ರಜ್ಞಾನವನ್ನು ಬಳಸುವಾಗ ಆಥವ ತಂತ್ರಜ್ಞಾನ ಬಳಸಿಕೊಂಡು ಸಂವಹನ ನಡೆಸುವಾಗ ಅನುಸರಿಸಬೇಕಾದ
ಕೆಲವು ಶಿಷ್ಟಾಚಾರಗಳನ್ನು ವಿವರಿಸುತ್ತದೆ. ಡಿಜಿಟಲ್ ಎಟಿಕೆಟ್ ಪ್ರಕಾರ, ಬಳಕೆದಾರ ಜವಾಬ್ದಾರಿಯುತವಾಗಿ, ಸೂಕ್ತವಾಗಿ ಮತ್ತು ಗೌರವಪೂರ್ವಕವಾಗಿ ಸಂವಹನ ನಡೆಸುವುದು ಸಭ್ಯತೆ. ಈ ಸಭ್ಯತೆಗಳು
ವಿಶ್ವವ್ಯಾಪಿ ಏಕಪ್ರಕಾರವಲ್ಲ. ಆಯಾ ಪ್ರದೇಶ ಮತ್ತು ಅಲ್ಲಿನ ಸಾಮಾಜಿಕ ನಡವಳಿಕೆಗಳನ್ನು
ಅನುಸರಿಸಿ ಬದಲಾಗುತ್ತವೆ.
ಅನುಸರಿಸಬಹುದಾದ ಸಭ್ಯತೆ:
- ನಮ್ಮ ಫೇಸ್‌ಬುಕ್‌ನ ವಾಲ್‌ನಲ್ಲಿ ಕಾಣುವ ಪ್ರತಿಯೊಬ್ಬರಿಗೂ, ಪ್ರತಿಯೊಂದಕ್ಕೂ ಕಾಮೆಂಟ್ ಮಾಡುವುದಕ್ಕೆ ಬದಲು ನಮಗೆ ಪರಿಚಿತರಿರುವ, ಗೆಳೆಯರ ಪೋಸ್ಟ್‌ಗಳಿಗೆ ಮಾತ್ರವೇ ಕಾಮೆಂಟ್ ಮಾಡುವುದು ಉತ್ತಮ. ನಮ್ಮ ಕಾಮೆಂಟ್‌ನಿಂದ ಇತರರು ಮುಜುಗರಪಟ್ಟುಕೊಳ್ಳುವಂತಾಗಬಾರದು.
- ತೀರ ಆತ್ಮೀಯರ ಸರ್ಕಲ್‌ನಲ್ಲಿ
ನಡೆಯುವ ಸಂವಾದದಲ್ಲಿ ಆ ಗುಂಪಿಗೆ ಸೇರದ ನಾವು ಕಾಮೆಂಟ್ ಮಾಡುವುದು ಸಭ್ಯತೆ ಅಲ್ಲ. ಜೊತೆಗೆ
ಅಲ್ಲಿ ನಮ್ಮ ಕಾಮೆಂಟ್‌ಗೆ ಬೆಲೆಯೂ ಸಿಗುವುದಿಲ್ಲ. ಅದು ಎಲ್ಲರಿಗೂ ಸಂಬಂಧಿಸಿದ ಸಾರ್ವಜನಿಕ
ಚರ್ಚೆಯಾದರೆ ತೊಂದರೆಯಿಲ್ಲ. ಆದರೆ ಅದು ಖಾಸಗಿ ಚರ್ಚೆಯಾದರೆ ದೂರ ಉಳಿಯುವುದೇ ಒಳಿತು.
- ಸೂಕ್ಷ ವಿಷಯದ ಮೇಲೆ
ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು
‘ಲೈಕ್’ ಮಾಡುವುದು, ಹಸಿ
ಹಸಿಯಾಗಿ ಪ್ರತಿಕ್ರಿಯಿಸುವುದು ಬೇಡವೇ ಬೇಡ. ಯಾಕೆಂದರೆ ಒಂದು ಕಾಮೆಂಟ್ ನಮ್ಮನ್ನು ಕಂಬಿ
ಹಿಂದೆ ತಳ್ಳಬಹುದು. ಒಂದು ಲೈಕ್‌ನಿಂದಾಗ ಪೊಲೀಸರು ನಮ್ಮ ಮನೆಯ ಕದ ತಟ್ಟಬಹುದು. ತೀರ
ಸೂಕ್ಷ್ಮ ವಿಷಯಗಳ ಚರ್ಚೆಯಿಂದ ದೂರ ಉಳಿಯುವುದೇ ಸೂಕ್ತ.
- ಸ್ನೇಹಿತರಿಗೆ ಕಾಮೆಂಟ್
ಮಾಡುವಾಗ ಎಚ್ಚರವಿರಲಿ. ತೀರಾ ಸಲುಗೆಯ, ತುಂಟತನದ ಕಾಮೆಂಟ್
ಇಲ್ಲದಿದ್ದರೆ ಉತ್ತಮ. ಯಾಕೆಂದರೆ ಆ ಕಾಮೆಂಟ್‌ನ್ನು ನಮ್ಮ ಸ್ನೇಹಿತರು ಮಾತ್ರವೇ
ನೋಡುವುದಿಲ್ಲ. ಬದಲು ಅಲ್ಲಿರುವ ಇಡೀ ನೆರ್ಟ್‌ವಕ್Fಗೆ ಅದರ ದರ್ಶನವಾಗುತ್ತೆ.
- ಜೋಕ್‌ಗಳನ್ನು ಪೋಸ್ಟ್
ಮಾಡುವಾಗ ಸ್ವಲ್ಪ ವಿವೇಚನೆ ಇರುವುದು ಒಳಿತು. ತೀರಾ ಪೋಲಿ ಎಸ್‌ಎಂಎಸ್‌ಗಳನ್ನು ಪೋಸ್ಟ್
ಮಾಡಿ ನಮ್ಮ ಮಾನ ನಾವೇ ಹರಾಜು ಹಾಕಿಕೊಳ್ಳುವುದು ಬೇಡ.
- ನಮ್ಮ ಸರ್ಕಲ್‌ನಲ್ಲಿರುವ
ಯಾರಾದರೂ ಯಾವುದೋ ವಿಷಯದ ಮೇಲೆ ತಮ್ಮ ನಿಲುವು ವ್ಯಕ್ತಪಡಿಸಿದ್ದು, ಅದನ್ನು
ನಾವು ಒಪ್ಪದೇ ಇರಬಹುದು. ಆದರೆ ಅದನ್ನು ಹೇಳುವಾಗ ಉದ್ಧಟನತ ಪ್ರದರ್ಶಿಸುವುದು ತರವಲ್ಲ.
ನಮಗೆ ಅವರ ನಿಲುವಿನ ಬಗ್ಗೆ ತಕರಾರಿದ್ದರೆ ಅದನ್ನು ನೇರಾನೇರ ಖಂಡಿಸದೆ ಸಭ್ಯತೆ ಮಿತಿ
ಮೀರದಂತೆ ವಾಗ್ವಾದ ಇರಲಿ. ನೆನಪಿರಲಿ, ನಮ್ಮ ಕಾಮೆಂಟ್
ಶಾಶ್ವತವಾಗಿ ದಾಖಲಾಗುತ್ತದೆ. ಅದು ಫೇಸ್‌ಬುಕ್ ವಾಲ್‌ನಲ್ಲಿ ದಾಖಲಾದರೆ
ಪರ್ವಾಗಿಲ್ಲ ಬದಲು ಅವರ ಮನಸ್ಸಿನಲ್ಲಿ ರಿಜಿಸ್ಟರ್ ಆದರೆ ಕಷ್ಟ.

- ಕಾಮೆಂಟ್‌ಗಳಲ್ಲಿ ಜಾರ್ಗನ್
ಅಥವಾ ಸಂಕೇತಾತ್ಮಕ ಅಕ್ಷರಗಳನ್ನು ಬರೆಯುವುದು ಕೆಲವರಿಗೆ ಒಂದು ರೀತಿಯ ಚಾಳಿ. ಆದರೆ
ಅದನ್ನು ಓದುವ ಎಲ್ಲರಿಗೂ ಅರ್ಥವಾಗುವುದಿಲ್ಲ ಎನ್ನುವುದು ನೆನಪಿರಲಿ. ಬಹುತೇಕರಿಗೆ ಅವುಗಳ
ವಿಸ್ತೃತ ಅರ್ಥ ತಿಳಿದಿರುವುದಿಲ್ಲ. ಜೊತೆಗೆ ಎಮೋಷನ್‌ಗಳನ್ನು ಸೂಚಿಸುವ ಸಂಕೇತಗಳನ್ನು
ಬಳಸುವಾಗಲೂ ಇದು ಅನ್ವಯಿಸುತ್ತದೆ.
- ಕ್ಯಾಪಿಟಲ್ ಲೆಟರ್‌ಗಳಲ್ಲಿ
ಕಾಮೆಂಟ್ ಬರೆಯಬೇಡಿ. ಯಾಕೆಂದರೆ ಕ್ಯಾಪಿಟಲ್ ಅಕ್ಷರ್‌ಗಳಲ್ಲಿ ಬರೆಯುವುದು ಕೂಗಾಟ, ರೇಗಾಟದ
ಸಂಕೇತ.
- ಸಾಮೂಹಿಕವಾಗಿ ಫೇಸ್‌ಬುಕ್‌ನಲ್ಲಿ
ಮದುವೆಗೆ ಆಹ್ವಾನಿಸುವುದು ಈಗಿನ ಹೊಸ ಟ್ರೆಂಡ್. ಅದು ಅಷ್ಟು
ಸಭ್ಯತೆ ಎನಿಸುವುದಿಲ್ಲ. ಆಹ್ವಾನಿಸುವುದರಲ್ಲಿ ತಪ್ಪೇನು ಇಲ್ಲ. ಆದರೆ ನೇರವಾಗಿ ಮದುವೆಗೆ
ಕರೆಯುವ ‘ಆಪ್ತ ಆಹ್ವಾನ’ಕ್ಕೆ ಇದು
ಪರ್ಯಾಯವಾಗಬಾರದು. ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ಮದುವೆ ಆಹ್ವಾನಪತ್ರಿಕೆ
ಪೋಸ್ಟ್ ಮಾಡಿ ಎಲ್ಲರನ್ನೂ ಮದುವೆಗೆ ಕರೆದು ಅದೇ ಅಧಿಕೃತ ಆಹ್ವಾನ ಎಂದು ಭಾವಿಸುವ
ಪ್ರವೃತ್ತಿ ಜಾಸ್ತಿಯಾಗುತ್ತಿದೆ. ಇನ್ನೂ ಕೆಲವರು ಒಂದು ಮೆಸೇಜ್ ಕಳಿಸಿ, ಇಲ್ಲವೇ
ಲಗ್ನ ಪತ್ರಿಕೆ ಅಟ್ಯಾಚ್ ಮಾಡಿ ಇ-ಮೇಲ್ ಕಳಿಸುವ ಮೂಲಕವೇ
ಆತ್ಮೀಯತೆ ಮರೆಯುತ್ತಾರೆ. ಇಂಥಹ ಸಮಯದಲ್ಲಿ ಮದುವೆಗೆ ಬರುವುದಿರಲಿ, ನಮ್ಮ
ಬಗ್ಗೆ ಇದ್ದ ಗೌರವವೂ ಇಲ್ಲವಾಗುವ ಸಾಧ್ಯತೆಯೇ ಹೆಚ್ಚು.
- ಸ್ನೇಹಿತರ ಇಲ್ಲವೇ ‘ಫ್ರೆಂಡ್ಸ್’ ಬಳಗದಲ್ಲಿರುವ
ಯಾರದೋ ಹುಟ್ಟು ಹಬ್ಬವಿದ್ದರೆ. ನಯವಾಗಿ ಶುಭಾಶಯ ತಿಳಿಸಬೇಕು. ನೆಗೆಟಿವ್ ಕಾಮೆಂಟ್‌ಗಳು
ಬೇಡವೇ ಬೇಡ. ಅದು ಬರ್ತಡೇ ಆಚರಿಸಿಕೊಳ್ಳುವವರ ಅಂದಿನ ಸಂಭ್ರಮವನ್ನೇ ಹೊಸಕಿ ಹಾಕಬಹುದು.
ಆಪ್ತರ ಹುಟ್ಟುಹಬ್ಬಕ್ಕೆ ಫೇಸ್‌ಬುಕ್, ಟ್ವಿಟರ್ ಅಥವಾ ಗೂಗಲ್
ಪ್ಲಸ್‌ನಲ್ಲಿ ವಿಶ್ ಮಾಡಿ ‘ಜವಾಬ್ದಾರಿ’ ತೊಳೆದುಕೊಳ್ಳಬೇಡಿ.
ಇ-ಮೆಲ್ , ಮೆಸೇಜ್‌ಗಳಲ್ಲೇ ಶುಭಾಶಯ ಹೇಳುವುದು ನಮ್ಮ ಅಶಿಸ್ತಿನ
ಸಂಕೇತ.
- ಇತರರು ಪೋಸ್ಟ್ ಮಾಡಿರುವ ವೈಯಕ್ತಿಕ
ಪೋಟೋಗಳನ್ನು ಶೇರ್ ಮಾಡುವ ಮೊದಲು ಅವರ ಅನುಮತಿ ಕೇಳುವುದು ಸಭ್ಯತೆ. ಅವರು ತಮ್ಮ
ಸ್ನೇಹಿತರು ನೋಡಲಿ ಎಂದು ಪೋಸ್ಟ್ ಮಾಡಿರುತ್ತಾರೆ. ಅವರನ್ನು ಕೇಳದೆಯೇ ಅದನ್ನು
ಜಗಜ್ಜಾಹೀರು ಮಾಡುವ ಹಕ್ಕು ನಮಗಿಲ್ಲ.
- ನಾವು ಶೇರ್ ಮಾಡಲು ಬಯಸುವ
ನಮ್ಮದೇ ಫೋಟೋದಲ್ಲಿ ನಮ್ಮ ಸ್ನೇಹಿತರಿದ್ದರೆ ಅದನ್ನು ಪೋಸ್ಟ್ ಮಾಡುವ ಮುನ್ನ ಅವರ
ಅಭಿಪ್ರಾಯ ಕೇಳುವುದು ಸೂಕ್ತ. ಯಾಕೆಂದರೆ ಕೆಲವರಿಗೆ ಸಾರ್ವಜನಿಕ ವೇದಿಕೆಗೆ ಬರುವುದು
ಇಷ್ಟವಾಗದೇ ಇರಬಹುದು.
- ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ
ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು ಎನ್ನುವ ಅಭಿಪ್ರಾಯ ಈಗ
ಚಾಲ್ತಿಯಲ್ಲಿದೆ. ಇದು ಬಹುತೇಕ ನಿಜವೂ ಹೌದು. ನಮಗೆ ಕೆಲಸ ಕೊಡುವವರು ನಮ್ಮ ಫೇಸ್‌ಬುಕ್
ಅಕೌಂಟ್ ತೆರೆಯಬಹುದು; ಹೆಣ್ಣು, ಅಥವ
ಗಂಡು ಕೊಡುವವರು ನಮ್ಮ ಫೇಸ್‌ಬುಕ್ ಗೋಡೆಯ ಮೇಲೊಮ್ಮೆ ಕಣ್ಣಾಯಿಸಬಹುದು; ಪ್ರೇಮಿಗಳಿಗೆ
ಪರಸ್ಪರರ ‘ಸಾಚಾತನ’ ತಿಳಿಯಲು ಫೇಸ್ಬುಕ್
ಅಕೌಂಟ್ ಒಂದು ರೀತಿಯಲ್ಲಿ ಪ್ರೈವೇಟ್ ಡಿಟೆಕ್ಷಿವ್ ಇದ್ದಂತೆ . ಯಾಕೆಂದರೆ, ನಮಗೇ
ತಿಳಿಯದಂತೆ ಫೇಸ್‌ಬುಕ್‌ನ ನಮ್ಮ ವಾಲ್‌ನಲ್ಲಿ ನಮ್ಮ ನಮ್ಮ ಬಣ್ಣ ಬಯಲಾಗುವ
ಸಾಧ್ಯತೆ ಹೆಚ್ಚು.
- ತಂತ್ರಜ್ಞಾನವನ್ನು
ಬಳಸುವಾಗ ವಿಶೇಷವಾಗಿ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಬೇರೊಬ್ಬರೊಂದಿಗೆ ಸಂವಹನ ನಡೆಸುವಾಗ
ವಿದೇಯತೆ, ಗೌರವ ಅತ್ಯಗತ್ಯ.
- ಕೊನೆಯದಾಗಿ ಒಂದು ಮಾತು ಮೇಲ್, ಮೆಸೇಜ್, ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ನಾವು ಮಾಡುವ ಕಾಮೆಂಟ್, ಹಾಕುವ ಫೋಟೋ, ಕೋಪ, ತಾಪ, ಮಾಡುವ ಕುಚೇಷ್ಟೆ, ತುಂಟಾಟ, ಹುಚ್ಚಾಟ, ಅಜ್ಞಾನ, ಘನ ಪಾಂಡಿತ್ಯ, ಎಲ್ಲವೂ ಬಹಳ ದೀರ್ಘ ಕಾಲ ಉಳಿಯುವಂಥದ್ದು. ಜೊತೆಗೆ ಅದನ್ನು ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳುವ ಅವಕಾಶ ಇರುವಂಥದ್ದು. ಅಲ್ಲದೆ ಕಾನೂನು ಕಟ್ಟಳೆಗಳಿಗೆ ಪ್ರಬಲ ಸಾಕ್ಷ್ಯವೂ ಹೌದು. ಮುಂದೆ ನಾವು ವರ್ತನೆಯಲ್ಲಿ, ಬೌದ್ದಿಕತೆಯಲ್ಲಿ ಬೆಳೆದರೂ ಹಿಂದಿನ ನಮ್ಮ ಅಜ್ಞಾನ, ಅಪ್ರಬುದ್ಧತೆ ಮಾತ್ರ ಶಾಶ್ವತವಾಗಿ ದಾಖಲಾಗಿರುತ್ತದೆ ಎಂದಿಗೂ ಅಳಿಸಲಾಗದ ಕಲೆಯ ಹಾಗೆ.
Comments
Post a Comment