ಕೃಷಿಯಲ್ಲಿ ಶುರುವಾಗಿದೆ ಕೃತಕ ಬುದ್ಧಿವಂತಿಕೆ ಕ್ರಾಂತಿ


 ಮಳೆ, ಹವಾಮಾನ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ನಿಂತಿರುವ ಭಾರತದ ಕೃಷಿಗೆ ಹಲವು ಅಡ್ಡಿ ಆತಂಕಗಳಿವೆ. ಭಾರತದ ಬಹುತೇಕ ಬೇಸಾಯ ಮಳೆಯ ಮೇಲೆ ನಿಂತಿದೆ. ಮಳೆ ಮುಗಿಲು ಸೇರಿದರೂ ಸಮಸ್ಯೆ; ಅತಿಯಾಗಿ ಸುರಿದರೂ ಅಪಾಯ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯೂ ಈ ಕ್ಷೇತ್ರವನ್ನು ಬಾಧಿಸುತ್ತಿದೆ. ದಶಕಗಳ ಕಾಲ ಭೂಮಿ ತಾಯಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ನುಂಗಿ ಬಂಜೆಯಾಗುತ್ತಿದ್ದಾಳೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಹೇಗೋ ಒಳ್ಳೆಯ ಬೆಳೆ ತೆಗೆದರೆ ಸರಿಯಾದ ಮಾರುಕಟ್ಟೆಯಂತೂ ಸಿಗುವುದಿಲ್ಲ, ಖರ್ಚಿನ ಮೇಲೆ ಒಂದಿಷ್ಟು ಲಾಭ ನೋಡುವಷ್ಟು ಬೆಲೆ ದೊರಕುವುದು ಅಪರೂಪವೇ ಸರಿ. ಇದೆಲ್ಲದರ ನಡುವೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಯಂತ್ರಾಧಾರಿತ ಆಧುನಿಕ ಬೇಸಾಯದ ಕ್ರಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ.
ಆದರೆ, ಈಗ ನಾವು ಕೃಷಿ ಕ್ಷೇತ್ರದಲ್ಲಿ ಹೊಸದೊಂದು ಸಂಚಲನವನ್ನು ಕಾಣುತ್ತಿದ್ದೇವೆ. ಆ ಸಂಚಲನ ಹಿಂದೆಂದೂ ನೋಡಿರದಂಥದ್ದು. ಇದು ಕೇವಲ ಆಧುನಿಕವಲ್ಲ, ಅತ್ಯಾಧುನಿಕ. ಈ ಅತ್ಯಾಧುನಿಕ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ನಾವೀಗ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಉತ್ತರ ಹೇಳಬಲ್ಲಂಥದ್ದು. ಅದುವೇ ಕೃಷಿ ಕ್ಷೇತ್ರದ ಕೃತಕ ಬುದ್ಧಿವಂತಿಕೆ. ಒಟ್ಟಾರೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಪಂಚದಲ್ಲಿ ಬಹುದೊಡ್ಡ ಸಂಚಲನ ಹುಟ್ಟು ಹಾಕಿರುವ ಕೃತಕ ಬುದ್ಧಿವಂತಿಕೆ ಎಂದರೆ ಆರ್ಟಿಫಿಷಿಯಲ್ ಇಂಟೆಲೆಜೆನ್ಸಿ ಈಗ ಕೃಷಿಯಲ್ಲೂ ವ್ಯಾಪಕ ಬಳಕೆಗೆ ಸಜ್ಜಾಗುತ್ತಿದೆ. ಮನುಷ್ಯ ಶ್ರಮ ನಂಬಿ ನಡೆಯುವ ಬೇಸಾಯದಲ್ಲಿ ಇನ್ನೆಂಥ ಕೃತಕ ಬುದ್ದಿವಂತಿಕೆ? ಎನ್ನುವ ಕುಹಕದ ಪ್ರಶ್ನೆ ಎಂಥವರನ್ನೂ ಕಾಡುವುದು ಸಹಜವೇ. ಆದರೆ, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಒಂದಿಷ್ಟು ಇಳಗೆ ಇಳಿದರೆ ಕೃತಕ ಬುದ್ಧಿವಂತಿಕೆಯ ವಿಶ್ವರೂಪದರ್ಶನವಾಗಿ ದಂಗುಬಡಿದಂತಾಗುತ್ತದೆ. ಅದರಲ್ಲೂ ಕೃಷಿಯಲ್ಲಿ ಇದನ್ನು ಅನ್ವಯಿಸಲು, ಬಳಸಲು ತಂತ್ರಜ್ಞಾನ ಕಂಪನಿಗಳು ಆತುರುಪಡುತ್ತಿರುವುದನ್ನು ನೋಡಿದರೆ ಇನ್ನಷ್ಟು ಅಚ್ಚರಿಯಾಗುತ್ತದೆ. ಸ್ವತಃ ವಿಶ್ವದ ತಂತ್ರಜ್ಞಾನ ದಿಗ್ಗಜ ಕಂಪನಿ ಮೈಕ್ರೊಸಾಫ್ಟ್ ಕೃಷಿ ಕ್ಷೇತ್ರದಲ್ಲಿ ಅಡಿಯಿಟ್ಟು ತನ್ನ `ಕೃತಕ ಬುದ್ಧಿವಂತಿಕೆಯ' ಸಾಮಥ್ರ್ಯ ಪರೀಕ್ಷಿಸುತ್ತಿದೆ. ಅದೂ ಭಾರತದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದೆ ಎನ್ನುವುದು ಇನ್ನೂ ಕುತೂಹಲದ ವಿಚಾರ. ಮನುಷ್ಯಕೋಟಿಯ ಆಹಾರದ ಅಗತ್ಯವನ್ನು ನೀಗಿಸುವುದೇ ತನ್ನ ಗುರಿ ಎಂಬಂತೆ ನುಗ್ಗುತ್ತಿರುವ ಈ ತಂತ್ರಜ್ಞಾನದ ಕುರಿತು ಚಿಂತಿಸಲೇಬೇಕಾದ ಅನಿವಾರ್ಯತೆ ಬಂದೊಗಿದೆ.

ಕೃತಕ ಬುದ್ಧಿವಂತಿಕೆ ಕ್ರಾಂತಿ ಈಗಾಗಲೇ ಭಾರತದಲ್ಲ್ಲೂ ಆರಂಭವಾಗಿದೆ. ಹೌದು, ಇದು ನಿಜ ಅರ್ಥದಲ್ಲಿ ಕ್ರಾಂತಿಯೇ. ಹಲವು ದೈತ್ಯ ಕಂಪನಿಗಳು ಹೊಸ ಹೊಸ ಆವಿಷ್ಕಾರ ಮತ್ತು ಅದರ ಅನ್ವಯಿಕೆಯಲ್ಲಿ ಭಾರೀ ಆಸಕ್ತಿ ವಹಿಸಿ ಅಖಾಡಕ್ಕಿಳಿದಿವೆ. ಕೃತಕ ಬುದ್ಧಿವಂತಿಕೆಯನ್ನು ಹೇಗೆ ಬೇಕಾದರೂ ಬಳಸಲು ಸಾಧ್ಯತೆ ಇದೆಯಾದರೂ ಈಗ ಅತ್ಯಂತ ಅಗತ್ಯವಿರುವ ರೂಪದಲ್ಲಿ ಇದನ್ನು ಅನ್ಯಯಿಸಲಾಗುತ್ತಿದೆ.

ರೋಬಾಟ್ ಕೂಲಿಯಾಗಳು 
ಮೇಲೆ ಹೇಳಿರುವಂತೆ ಕೃಷಿ ಕ್ಷೇತ್ರದ ಈಗಿನ ಬಹುದೊಡ್ಡ ಸಮಸ್ಯೆ ಕೂಲಿಕಾರರ ಸಮಸ್ಯೆ. ದೊಡ್ಡ ಮಟ್ಟದಲ್ಲಿ ಬೇಸಾಯ ಮಾಡಲು ಹೋದರೆ ಮೊದಲಿಗೆ ಮನಸ್ಸಿಗೆ ಬರುವುದು ಕಾರ್ಮಿಕರ ಕೊರತೆ. ಕೃಷಿಯಲ್ಲಿ ತೊಡಗುವವರ ಸಂಖ್ಯೆ ಕಡಿಮೆಯಾಗಿರುವುದು, ಓದು, ಉದ್ಯೋಗ ಎಂಬಿತ್ಯಾದಿ ಕಾರಣಗಳಿಗೆ ಯುವಕರಲ್ಲಿ ನಗರ ಸೇರಿರುವುದು, ವೈಟ್ ಕಾಲರ್ಡ್ ಜಾಬ್‍ಗಳ ಮೇಲೆ ವ್ಯಾಮೋಹ ಹೆಚ್ಚಿರುವುದು, ಸ್ವಂತ ಉದ್ಯೋಗಗಳಲ್ಲಿ ಜನರಿಗೆ ಅಸಕ್ತಿ ಜಾಸ್ತಿಯಾಗಿ, ಸರಕಾರದ ಪ್ರೋತ್ಸಾಹವೂ ದೊರೆಯುತ್ತಿರುವ ಕಾರಣ - ಹೀಗೆ ಇನ್ನೂ ಹಲವು ಕಾರಣಗಳಿಗೆ ಹಳ್ಳಿಗಳಲ್ಲಿ ಹೊಲಗಳಲ್ಲಿ ದುಡಿಯುವ ಕೂಲಿಯಾಳುಗಳ ಕೊರತೆ ಬಹುವಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ರೋಬಾಟ್‍ಗಳ ಮೂಲಕ ನೀಗಿಸಲು ಕಂಪನಿಗಳು ಸಜ್ಜಾಗಿವೆ. ರೋಬಾಟ್‍ಗಳನ್ನು ಬೇಸಾಯದಲ್ಲಿ ಬಳಸಲು ತುಂಡು ಜಮೀನು ಹೊಂದಿರುವವರಿಗೆಲ್ಲಿ ಸಾಧ್ಯ? ಅದೇನಿದ್ದರೂ ನೂರಾರು ಎಕರೆ ಜಮೀನು ಹೊಂದಿರುವವರಿಗೆ ಮಾತ್ರ ಎಂದು ಸುಮ್ಮನಾಗಿಬಿಡಬಹುದು. ಆದರೆ, ಸದ್ಯಕ್ಕೆ ದೊಡ್ಡ ಜಮೀನುಗಳಲ್ಲಿ ಮಾತ್ರ ಇವುಗಳನ್ನು ಬಳಸಬಹುದು. ಆದರೆ ಈಗ ನಡೆಯುತ್ತಿರುವ ಆವಿಷ್ಕಾರ ಮತ್ತು ಸಂಶೋಧನೆ ನೋಡಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಸಣ್ಣ ರೈತರೂ ಹೊಲದಲ್ಲಿ ಕೆಲಸ ಮಾಡಿಸಲು ರೋಬೊ ಕೂಲಿಯಾಳುಗಳನ್ನು ಇಟ್ಟುಕೊಂಡರೂ ಆಶ್ಚರ್ಯವಿಲ್ಲ. ಇಲ್ಲವೇ, ರೋಬೊ ಕೂಲಿಯಾಳುಗಳನ್ನು ದಿನಗೂಲಿಗೆ ಸರಬರಾಜು ಮಾಡುವವರೂ ಮುಂದೆ ಬರಬಹುದು. ಆಗ ಹೊಲಗಳಲ್ಲಿ ತಿರುಗಾಡುವ ರೋಬೋಗಳು ಮನುಷ್ಯರಿಗಿಂತ ವೇಗವಾಗಿ, ಅಚ್ಚುಕಟ್ಟಾಗಿ ಟೀ, ಕಾಫಿ, ಬೀಡಿ ಸಿಗರೇಟು ಎಂದೆಲ್ಲ ಕೇಳದೆ, ವಿಶ್ರಾಂತಿಯನ್ನೂ ಬಯಸದೆ ಕೆಲಸ ಮಾಡುವುದನ್ನು ಕಾಣಬಹುದು. ನೆನಪಿರಲಿ, ಇದು ದಶಕಗಳ ಮಾತಲ್ಲ, ಕೆಲವೇ ವರ್ಷಗಳ ಮಾತು.

ಮಣ್ಣಿನ ಆರೋಗ್ಯ ಪರೀಕ್ಷೆ
ಮಣ್ಣಿನ ಫಲವತ್ತತೆ ಬೇಸಾಯದ ಅತಿಮುಖ್ಯ ಅಂಶ. ಯಾವ ಬೆಳೆಗೆ ಯಾವ ಮಣ್ಣು ಸೂಕ್ತ ಮತ್ತು ಯಾವ ಮಣ್ಣಿನಲ್ಲಿ ಎಷ್ಟು ಪೋಶಕಾಂಶಗಳಿವೆ ಎನ್ನುವುದು ಒಳ್ಳೆಯ ಇಳುವರಿಯಲ್ಲಿ ನಿರ್ಣಾಯಕ. ಆದರೆ, ಈಗಿನ ಮಣ್ಣು ಪರೀಕ್ಷೆ ಮಾದರಿಗಳು ಸಕಾಲಕ್ಕೆ ರೈತರಿಗೆ ಮಣ್ಣಿನ ಆರೋಗ್ಯ ತಿಳಿಸುವಲ್ಲಿ ವಿಫಲವಾಗಿವೆ. ಅದರ ದೀರ್ಘ ಪ್ರಕ್ರಿಯೆಗೆ ಬೇಸತ್ತು ಎಷ್ಟೋ ರೈತರು ಮಣ್ಣು ಪರೀಕ್ಷೆ ಮಾಡಿಸುವ ಗೋಜಿಗೇ ಹೋಗುವುದಿಲ್ಲ. ಹೀಗಾಗಿ ತಾವು ಬಿತ್ತನೆ ಮಾಡಿದ ಬೆಳೆಗೆ ಬೇಕಾದ ಪೋಷಕಾಂಶಗಳು ಸೂಕ್ತ ಪ್ರಮಾಣದಲ್ಲಿ ಮಣ್ಣಿನಲ್ಲಿ ಇವೆಯೇ ಎನ್ನುವುದು ರೈತರಿಗೆ ಸರಿಯಾಗಿ ತಿಳಿಯುವುದೇ ಇಲ್ಲ. ಈ ಸಮಸ್ಯೆಗೆ ಕೃತಕ ಬುದ್ಧಿವಂತಿಕೆಯಲ್ಲಿ ಪರಿಹಾರವಿದೆ. ಮಣ್ಣಿನಲ್ಲಿ ಹುದುಗಿಸುವ ಒಂದು ಪುಟ್ಟ ಯಂತ್ರ ಆ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ, ಹೆಚ್ಚಳವನ್ನು ಕ್ಷಣಮಾತ್ರದಲ್ಲಿ ಮೊಬೈಲ್‍ನಲ್ಲೋ, ಕಂಪ್ಯೂಟರ್‍ನಲ್ಲೋ ತೋರಿಸಬಲ್ಲದು, ಅಷ್ಟು ಮಾತ್ರವಲ್ಲ, ರೈತ ಬಿತ್ತನೆ ಮಾಡಿರುವ ಬೆಳೆಗೆ ಬೇಕಾದ ಯಾವ ಪೋಷಕಾಂಶ ಕಡಿಮೆಯಿದೆ, ಯಾವುದು ಹೆಚ್ಚಿದೆ, ಅದನ್ನು ಸರಿದೂಗಿಸಲು ಏನು ಮಾಡಬೇಕು ಎನ್ನುವುದನ್ನೂ ತೋರಿಸಿಬಿಡುತ್ತದೆ. ಇಲ್ಲಿಗೆ ಬೇಸಾಯದ ಮತ್ತೊಂದು ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತಾಯಿತು. ಈಗಾಗಲೇ ಈ ತಂತ್ರಜ್ಞಾನ ಕೆಲವು ರಾಜ್ಯಗಳಲ್ಲಿ ಕಾರ್ಯಪ್ರವೃತ್ತವಾಗಿದೆ.

ಹೊಲಗಳ ಮೇಲೆ ಡ್ರೋಣ್ ಹಾರಾಟ
ಹತ್ತಾರು, ನೂರಾರು ಎಕರೆಗಳಲ್ಲಿ ಬೆಳೆ ಇಟ್ಟಾಗ ಅದನ್ನು ನೋಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇದನ್ನು ಸುಲಭವಾಗಿಸಲು ಬುದ್ಧಿವಂತ ಡ್ರೋಣ್‍ಗಳು ಬಂಧಿವೆ. ಇವು ಹೊಲದ ಮೇಲೆ ಹಾರಾಡುತ್ತಾ ಇಡೀ ತೋಟವನ್ನು ವೀಕ್ಷಣೆ ಮಾಡುತ್ತವೆ. ಎಲ್ಲಾದರೂ ಬೆಳೆ ಹಾಳಾಗಿದ್ದರೆ ತೋರಿಸುತ್ತವೆ; ಯಾವುದಾದರೂ ರೋಗ ತೋಟದ ಯಾವುದೇ ಮೂಲೆಯಲ್ಲಿ ಶುರುವಾಗುತ್ತಿದ್ದರೆ ಅದನ್ನು ಪತ್ತೆ ಮಾಡಿ ಅಲರ್ಟ್ ಮಾಡುತ್ತವೆ. ಎಲೆಗಳ ಬಣ್ಣ ಮಾತ್ರದಿಂದಲೇ ಅವುಗಳ ಆರೋಗ್ಯ ಅಳೆಯಬಲ್ಲ ಡ್ರೋಣ್‍ಗಳು, ಒಟ್ಟಾರೆ ಬೆಳೆಯ ಆರೋಗ್ಯದ ಮೇಲೆ ಕಣ್ಣೀಡುತ್ತವೆ. ಕಾಡುಪ್ರಾಣಿಗಳ ಹಾವಳಿ, ಹಣ್ಣು ಹಂಪಲು ತಿನ್ನುವ ಪಕ್ಷಿಗಳ ಹಾವಳಿ ತಡೆಯಲೂ ಇದೇ ಡ್ರೋಣ್ ಸಾಕು. ಮೇಲೆ ಹಾರುತ್ತಾ ಇರುವ ಈ ಬುದ್ಧಿವಂತ ಡ್ರೋಣ್‍ಗಳು ನೈಜ ಸಮಯದಲ್ಲೇ ಮಾಹಿತಿಯನ್ನು ಕಳಿಸುತ್ತಿರುತ್ತವೆ. ಡ್ರೋಣ್ ಬಳಸಿಕೊಂಡು ಬೀಜ ಬಿತ್ತನೆ ಮಾಡುವ ತಾಂತ್ರಿಕತೆಯಂತೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಪ್ರಾತ್ಯಕ್ಷಿಕೆಯಾಗಿದೆ. ಇನ್ನು ಡ್ರೋಣ್‍ಗಳ ಮೂಲಕ ಔಷಧ ಸಿಂಪಡಿಸುವುದೂ ಸಾಧ್ಯವಿದ್ದು, ಒಂದೇ ದಿನದಲ್ಲಿ ಹತ್ತಾರು ಎಕರೆಗಳಿಗೆ ಔಷಧ ಸಿಂಪಡಿಸಿಬಿಡಬಹುದು. ಈ ಮೂಲಕ ಹರಡುವ ರೋಗಕ್ಕೆ ಕೂಡಲೇ ಬ್ರೇಕ್ ಹಾಕಬಹುದು.

ಬೆಳೆ ಭವಿಷ್ಯ, ಹವಾಮಾನ ಮುನ್ಸೂಚನೆ
ಮಳೆ, ಬಿಸಿಲು, ತೇವಾಂಶ, ಉಷ್ಣಾಂಶ ಇವು ಬೇಸಾಯದ ಬಹುಮುಖ್ಯ ವಿಚಾರಗಳು. ಇವುಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬಲ್ಲ ಬುದ್ಧಿವಂತ ತಂತ್ರಜ್ಞಾನಗಳು ಈಗಾಗಲೇ ಕೆಲಸ ಆರಂಭಿಸಿವೆ. ಈ ತಂತ್ರಜ್ಞಾನ, ಮಳೆಯ ಪ್ರಮಾಣ, ಅದರ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿ ಹೇಳಬಲ್ಲದು. ಹವಾಮಾನದಲ್ಲಿರುವ ತೇವಾಂಶ, ಉಷ್ಣಾಂಶವನ್ನು ಕರಾರುವಕ್ಕಾಗಿ ಲೆಕ್ಕ ಹಾಕಬಲ್ಲದು. ಸೈಕ್ಲೋನ್ ಹಿಡಿದರೆ, ಚಂಡಮಾರುತ ಶುರುವಾದರೆ ಹೊದಲ್ಲಿರುವ ಬೆಳೆಯ ಮೇಲೆ ಯಾವ ನಿರ್ದಿಷ್ಟ ಪರಿಣಾಮವಾಗುತ್ತದೆ ಎನ್ನುವುದನ್ನೂ ವಿಶ್ಲೇಷಿಸಿ ಹೇಳಬಲ್ಲ ಸಾಮಥ್ರ್ಯ ಈ ತಂತ್ರಜ್ಞಾನಕ್ಕಿದೆ. ಇಷ್ಟು ಮಾತ್ರವಲ್ಲದೆ ಬಿತ್ತನೆ ಇಲ್ಲವೇ ನಾಟಿಗೆ ಯಾವ ಕಾಲ ಅತ್ಯುತ್ತಮವಾಗಬಹುದು ಎನ್ನುವ ಆಯಾ ವರ್ಷದ ನಿಖರ ವಿಶ್ಲೇಷಣೆಯನ್ನೂ ಈ ತಂತ್ರಜ್ಞಾನ ಮಾಡುತ್ತದೆ. ವಿವಿಧ ಬೆಳೆಗಳಿಗೆ ರೋಗ ತಗುಲುವ ಸಾಧ್ಯತೆಯನ್ನೂ ಮೊದಲೇ ಹೇಳಿಬಿಡುವ ತಾಂತ್ರಿಕತೆ ಬಿತ್ತಿದ ಬೆಳೆ ಕೈ ತಪ್ಪದಂತೆ ಎಚ್ಚರಿಸುತ್ತದೆ.

ಬೆಳೆಗೆಷ್ಟು ನೀರು ಬೇಕು, ಚಿಂತಿಸಬೇಡಿ
ತುಂತುರು, ಹನಿ ನೀರಾವರಿ ಮತ್ತು ಕಾಲುವೆ ಮೂಲಕ ನಿರು ಹಾಯಿಸುವ ಕ್ರಮಗಳಲ್ಲಿ ಕರಾರುವಕ್ಕಾಗಿ ಬೆಳೆಗೆ ಬೇಕಾದಷ್ಟು ಮಾತ್ರವೇ ನೀರು ಹರಿಸುವ ತಂತ್ರಜ್ಞಾನವೂ ಸಿದ್ಧವಿದ್ದು, ಆಗಲೇ ಕೆಲವು ಕಡೆಗಳಲ್ಲಿ ಬಳಕೆಗೆ ಬಂದಿದೆ. ಹನಿ ನೀರಾವರಿಯಲ್ಲಿ ಒಂದು ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರವೇ ಹನಿಸುವ ಈ ತಂತ್ರಜ್ಞಾನ, ನೀರನ್ನು ಪೋಲು ಮಾಡುವುದಿಲ್ಲ, ಕೊರತೆಯನ್ನೂ ಮಾಡುವುದಿಲ್ಲ. ವಿಶೇಷ ಎಂದರೆ ಎಲ್ಲವೂ ಸ್ವಯಂಚಾಲಿತ. ಬೆಳೆಯ ಅಗತ್ಯ ನೋಡಿಕೊಂಡು ನೀರು ಬಿಡುವುದು ಇದರ ಕೆಲಸ. ಇದೇ ನಿಯಮ ತುಂತುರು ನೀರಾವರಿಗೂ ಅನ್ವಯಿಸುತ್ತದೆ. ಇಂಥ ಕೆಲಸ ಮಾಡುವ ಕೃತಕ ಬುದ್ಧಿವಂತಿಕೆಯ ಸಾಫ್ಟ್‍ವೇರ್‍ಗಳು ಅಭಿವೃದ್ಧಿಯಾಗಿವೆ.

ಫಸಲಿನ ಗ್ರೇಡಿಂಗ್ ಇನ್ನು ಸುಲಭ
ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ಏಜೆಂಟ್‍ಗಳು ಮಾಡುವ ಮೊದಲನೇ ಕೆಲಸ ಎಂದರೆ ಮಾಲನ್ನು ಗ್ರೇಡಿಂಗ್ ಮಾಡುವುದು. ಹೇಗಾದರೂ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಫಸಲನ್ನು ವಿವಿಧ ಗ್ರೇಡಿನ ಮಾಲನ್ನಾಗಿ ಏಜೆಂಟರು ವಿಭಜಿಸುತ್ತಾರೆ. ಇದರಿಂದ ರೈತರಿಗೆ ಅನಾನುಕೂಲವೇ ಹೆಚ್ಚು. ಟಾಪ್ ಗ್ರೇಡಿನ ಫಸಲಿಗೆ ಮಾತ್ರವೇ ಒಳ್ಳೆಯ ಬೆಲೆ ನೀಡುವ ಏಜೆಂಟ್ ಉಳಿದ ಮಾಲಿಗೆ ಕಡಿಮೆ ಬೆಲೆ ಕೊಟ್ಟು ಖರೀದಿಸುತ್ತಾನೆ. ಇದೇ ಕೆಲಸವನ್ನು ಮಾಡಲು ಈಗ ಯಂತ್ರಗಳು ಹೌದು. ಅದೂ ಭಾರತದಲ್ಲಿ. ವಿದೇಶಕ್ಕೆ ರಫ್ತು ಮಾಡುವ ಕೃಷಿ ಉತ್ಪನ್ನಗಳನ್ನು ಅದರ ಗುಣಮಟ್ಟ ಆಧರಿಸಿ ವಿವಿಧ ಬಗೆಯಾಗಿ ವಿಂಗಡಿಸಿ ಅದರಲ್ಲಿ ರಫ್ತು ಮಾಡಬಲ್ಲ ಅತ್ಯುನ್ನತ ಗುಣಮಟ್ಟದ ಮಾಲನ್ನು ಪ್ರತ್ಯೇಕಿಸಲು ಇದೇ ಕೃತಕ ಬುದ್ಧಿವಂತಿಕೆಯನ್ನು ಬಳಸಲಾಗುತ್ತಿದೆ. ಈ ಯಂತ್ರಗಳು ಕರಾರುವಕ್ಕಾಗಿ ಉತ್ಪನ್ನದ ಗುಣಮಟ್ಟ ಅಳೆದು ಅದಕ್ಕೆ ತಕ್ಕಂತೆ ಪ್ರತ್ಯೇಕಿಸುತ್ತವೆ. ಇಲ್ಲಿ ಏಜೆಂಟ್ ಮೋಸ ನಡೆಯುವುದಿಲ್ಲ.
ಕೃತಕ ಬುದ್ಧಿವಂತಿಕೆ, ಮೆಷಿನ್ ಲನಿಂಗ್, ಸ್ಯಾಟಲೈಟ್ ಇಮೇಜರಿ, ಅತ್ಯಾಧುನಿಕ ವಿಶ್ಲೇಷಣಾ ಪರಿಕರಗಳ ಸಹಾಯದಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಇನ್ನೂ ವಿವಿಧ ರೀತಿಯಲ್ಲಿ ಅನ್ವಯಿಸಲು ಸಂಶೋಧನೆ ನಡೆಸುತ್ತಿದ್ದಾರೆ. ಮುಂದೆ ಕೃಷಿ ಉತ್ಪಾದನೆ ಹೆಚ್ಚಬಹುದು; ಕೈಗಾರಿಕೆಗಳಲ್ಲಿ ಕಾರ್ಮಿಕರು ದುಡಿವಂತೆ ತಿಂಗಳ ಸಂಬಳಕ್ಕೆ ಹೊಲಗಳಲ್ಲಿ ದುಡಿಯುವ ವೈಟ್ ಕಾಲರ್ಡ್ ಉದ್ಯೋಗಿಗಳು ಕಾಣಬಹುದು. ಒಟ್ಟಿನಲ್ಲಿ ತಂತ್ರಜ್ಞಾನ ಏನೇ ಬಂದರೂ ಕೃಷಿಯ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿ ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಆಶಯ.

ಹೊಲಕ್ಕೆ ಬಂದಿದೆ ಮೈಕ್ರೊಸಾಫ್ಟ್
ತಂತ್ರಜ್ಞಾನ ದೈತ್ಯ ಮೈಕ್ರೊಸಾಫ್ಟ್ ಭಾರತದ ಕೃಷಿ ಕ್ಷೇತ್ರದಲ್ಲಿ ತನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತದೆ. ಭಾರತೀಯ ರೈತರಿಗೆ ನೆರವಾಗಲೆಂದೇ ಬಿತ್ತನೆ ಸಮಯದಲ್ಲಿ ಮಾಗದರ್ಶನ ಮಾಡಲು ಆಪ್ ಸಿದ್ಧಪಡಿಸಿದೆ. ನೀರು ಹಾಯಿಸುವಿಕೆ, ಡ್ರೋಣ್‍ಗಳ ನಿರ್ವಹಣೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ಮುಂತಾದ ವಿಚಾರಗಳಲ್ಲಿ ಕೃತಕ ಬುದ್ಧಿವಂತಿಕೆಯನ್ನು ಅಭಿವೃದ್ಧಿ ಮಾಡುತ್ತಿದೆ. ರೈತರ ಮೊಬೈಲ್‍ಗೆ ಹಲವು ರೀತಿಯ ಸಲಹೆ, ಸೂಚನೆ, ಮುನ್ಸೂಚನೆಗಳನ್ನು ಕಳಿಸುವ ಮೂಲಕ ರೈತರಿಗೆ ನೆರವಾಗಲು ಕಾರ್ಯಪ್ರವೃತ್ತವಾಗಿದೆ. ಆಂಧ್ರಪ್ರದೇಶ ಮತ್ತು ಕರ್ನಾಟದ ಮೇಲೆ ವಿಶೇಷ ಆಸ್ತೆ ವಹಿಸಿರುವ ಮೈಕ್ರೊಸಾಫ್ಟ್ ಈ ಮಾಹಿತಿಗಳನ್ನು ತೆಲುಗು ಮತ್ತು ಕನ್ನಡದಲ್ಲೇ ಕಳಿಸಲು ಯೋಜನೆ ರೂಪಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಬೇಸಾಯದ ವಿವಿಧ ಹಂತಗಳಲ್ಲಿ ಯಾವುದನ್ನು ಹೇಗೆ ನಿರ್ವಹಿಸಬೇಕು ಎಂಬ ವಿಚಾರದಲ್ಲಿ ಮೈಕ್ರೊಸಾಫ್ಟ್ ನೆರವಿನ ಟೆಕ್ಟ್ ಮೆಸೇಜ್ ಮತ್ತು ವಾಯ್ಸ್ ಮೆಸೇಜ್‍ಗಳು ರಾಜ್ಯದ ಎಲ್ಲ ರೈತರಿಗೂ ರವಾನೆಯಾಗಬಹುದು. ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲು ಈಗಾಗಲೇ ಈ ಕಂಪನಿ ದೇಶದಾದ್ಯಂತ ಕೃಷಿ ಉತ್ಪನ್ನಗಳ ಬೆಲೆ ವಿಶ್ಲೇಷಣೆ ಸರಕಾರಕ್ಕೆ ಒದಗಿಸುತ್ತಿದೆ.

ಮಹಾನಗರದಲ್ಲೂ ಬೇಸಾಯ ಶುರುವಾಗಿದೆ
ಬೇಸಾಯ ಎಂದರೇನೆ ಅದು ಮಣ್ಣಿನ ಜೊತೆಗಿನ ಒಡನಾಟ. ಆದರೆ, ಮಣ್ಣೇ ಇಲ್ಲದೆ ಬೆಳೆ ತೆಗೆಯುವ ತಾಂತ್ರಿಕತೆಯೂ ಬಂದಿದೆ. ಹಳ್ಳಿಗಳಲ್ಲೇ ಯಾಕೆ ಕೃಷಿ ಮಾಡಬೇಕು, ನಗರದಲ್ಲೂ ಬೆಳೆದು ತೋರಿಸುತ್ತೇವೆ ಎನ್ನುವ ಧಾಟಿಯಲ್ಲಿ ಈಗ ಅರ್ಬನ್ ಫಾರ್ಮಿಂಗ್ ಜನಪ್ರಿಯವಾಗುತ್ತಿದೆ. ಹಳ್ಳಿಗಳಲ್ಲಿ ಹೊಲದಲ್ಲಿ ಬೆಳೆ ಬೆಳೆದರೆ, ನಗರಗಳಲ್ಲಿ ಕಟ್ಟಡದ ಒಳಗೇ ಬೆಳೆ ತೆಗೆಯಲು ಶುರು ಮಾಡಿದ್ದಾರೆ. ಕಟ್ಟಡಗಳ ತಾರಸಿಯ ಕುಂಡಗಳಲ್ಲಿ ಸಣ್ಣ ಪುಟ್ಟ ತರಕಾರಿ ಬೆಳೆಯುವ ಬೇಸಾಯವಲ್ಲ ಇದು. ಕೃಷಿಗೆಂದೇ ಹೊಸ ಕಟ್ಟಡಗಳನ್ನು ಕಟ್ಟಿ ಅದರಲ್ಲಿ ಟನ್‍ಗಟ್ಟಲೆ ಬೆಳೆ ಬೆಳೆಯುವ ಪದ್ಧತಿ ಇದು. ವಿಶ್ವದ ಹಲವು ದೇಶಗಳಲ್ಲಿ ಇದಾಗಲೇ ಜನಪ್ರಿಯವಾಗುತ್ತಿದೆ. ಇಸ್ರೇಲ್‍ನಲ್ಲೂ ಈ ಮಾದರಿ ಕೃಷಿ ಆರಂಭವಾಗಿದೆ. ರಾಜ್ಯ ಸರಕಾರ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ನಮ್ಮಲ್ಲೂ ಜಾರಿ ಮಾಡಲು ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ಕಾನೂನು ತಿದ್ದುಪಡಿಗೂ ಮುಂದಾಗಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲೂ ಕೃಷಿ ತೋಟಗಳು ನಳನಳಿಸಬಹುದು. ಅಪಾರ್ಟ್‍ಮೆಂಟ್‍ಗಳಲ್ಲಿ ಕೆಲವು ಫ್ಲೋರ್‍ಗಳನ್ನು ವಾಸಕ್ಕೆ ಸಿದ್ಧ ಮಾಡಿದರೆ ಮತ್ತೆ ಕೆಲವು ಮಹಡಿಗಳನ್ನು ಕೃಷಿಗೆ ಮೀಸಲಿರಿಸಬಹುದು. ಅಲ್ಲಿನ ಜನರಿಗೆ ಬೇಕಾದ ಫ್ರೆಷ್ ಹಣ್ಣು, ತರಕಾರಿಗಳನ್ನು ಅಲ್ಲಿಯೇ ಬೆಳೆಯಬಹುದು. ಮಾಲ್ ರೂಪದ ಬೃಹತ್ ಕಟ್ಟಡಗಳು ಕೃಷಿಗೆಂದೇ ಎದ್ದು ನಿಲ್ಲಬಹುದು. ಅದರಲ್ಲಿ ಸಾವಿರಾರು ಕಾರ್ಮಿಕರು ಬೆಳೆ ಬೆಳೆಯಲು ಆರಂಭಿಸಬಹುದು. ಇದೇನು ದಶಕಗಳ ಕನಸಲ್ಲ, ಕೆಲ ವರ್ಷಗಳಲ್ಲಿ ಸಾಧ್ಯವಾಗಬಲ್ಲ ವಾಸ್ತವ. 

Comments

  1. Mgm casino mobile app - JTGHub
    The best Mgm 통영 출장안마 casino mobile app! Get your casino in your pocket 군포 출장안마 and start 논산 출장안마 playing. Slots.lv Casino is a 경상남도 출장마사지 leading casino 양주 출장마사지 site offering both free and real money casino

    ReplyDelete

Post a Comment

Popular posts from this blog

ಕನ್ನಡದಲ್ಲಿ ಹೇಳಿದ್ದನ್ನು ಸರಾಗವಾಗಿ ಬರೆದುಕೊಳ್ಳುವ 'ವಾಗಕ್ಷರ'

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?

ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ